ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಲೂಕು ಒಳಗೊಂಡು ವಿಜಯಪುರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ ರೈತ ಮೂರ್ಚಾ ಹಾಗೂ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ಸೋಮವಾರರಂದು ಕರೆ ನೀಡಿದ್ದ ತಾಳಿಕೋಟೆ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ೩ ದಿನಗಳ ಸತತ ಹೋರಾಟದ ನಂತರ ಸೋಮವಾರರಂದು ಸಂಪೂರ್ಣ ಬಂದ್ ಕರೆಯೊಂದಿಗೆ ಪಟ್ಟಣದ ಶ್ರೀ ಖಾಸ್ಗತೇಶ್ವರ ಮಠದಿಂದ ಬೃಹತ್ ಪ್ರತಿಭಟನೆಯ ಮೂಲಕ ಕತ್ರಿ ಬಜಾರ, ವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತ, ಬಸ್ ನಿಲ್ದಾಣದ ಮುಂಭಾಗದ ರಸ್ತೆಗುಂಟಾ ಹಾಯ್ದು ಬಸವೇಶ್ವರ ವೃತ್ತದಲ್ಲಿ ಸಭೆಯಾಗಿ ಮಾರ್ಪಟ್ಟಿತು.
ತಾಳಿಕೋಟೆ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಬಹುತೇಕ ಎಲ್ಲ ಅಂಗಡಿ-ಮುಂಗಟ್ಟುಗಳು ಬೆಳಗ್ಗೆಯಿಂದಲೇ ಮುಚ್ಚಿದ್ದವು. ಮದ್ಯ ಮಾರುಕಟ್ಟೆ, ಸರಾಫ್ ಬಜಾರ್, ಎಪಿಎಂಸಿ, ಕಿರಾಣಿ, ಅಡತ್ ಮರ್ಚಂಟ್, ತರಕಾರಿ, ಹಣ್ಣು ಸೇರಿದಂತೆ ವಿವಿಧ ವ್ಯಾಪಾರ ವಹಿವಾಟುಗಳು ಸಂಪೂರ್ಣ ಸ್ಥಗಿತಗೊಂಡಿದ್ದವು. ಪರಿಣಾಮ ಪಟ್ಟಣದ ಪ್ರಮುಖ ರಸ್ತೆಗಳು ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿದ್ದವು. ಬಂದ್‌ಗೆ ವ್ಯಾಪಾರಸ್ಥರು, ರೈತರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

