ತಾಳಿಕೋಟೆ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಲು ಆಗ್ರಹ | ಸರ್ಕಾರ ಸ್ಪಂದಿಸದಿದ್ದರೆ ಡಿಸಿ ಕಚೇರಿಗೆ ಮುತ್ತಿಗೆ | ಮಾಜಿ ಶಾಸಕ ಸೋಮನಗೌಡ ಎಚ್ಚರಿಕೆ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಬಿಜೆಪಿ ರಾಜ್ಯ ರೈತ ಮೂರ್ಚಾ ಹಾಗೂ ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ನಡೆದ ಬೃಹತ್ ಹೋರಾಟ ಯಶಸ್ವಿಯಾಗಿದೆ.
ಪ್ರತಿಭಟನಾ ನಂತರ ಬಸವೇಶ್ವರ ವೃತ್ತದಲ್ಲಿ ನಡೆದ ಭಹಿರಂಗ ಸಭೆಯಲ್ಲಿ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಅವರು ಮಾತನಾಡಿ ಬರ ಪರಿಹಾರ ಘೋಷಣೆ ವಿಚಾರದಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ತಾಳಿಕೋಟೆ ತಾಲೂಕು ಒಳಗೊಂಡು ವಿಜಯಪುರ ಜಿಲ್ಲೆಯಲ್ಲಿಯೇ ಸಮರ್ಪಕ ಮಳೆಯಾಗದೆ ಹತ್ತಿ, ತೊಗರಿ ಸೇರಿದಂತೆ ವಿವಿಧ ಬೆಳೆಗಳು ಹಾನಿಗೊಳಗಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಾಲೂಕನ್ನು ತೀವ್ರ ಬರಪೀಡಿತ ತಾಲೂಕು ಎಂದು ಘೋಷಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಅಧಿವೇಶನದಲ್ಲಿ ಜಿಲ್ಲೆಯ ಎಲ್ಲ ಶಾಸಕರು ತಾಳಿಕೋಟೆ ತಾಲೂಕನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ರೈತರ ಸಮಸ್ಯೆಗೆ ಸ್ಪಂದಿಸದಿದ್ದರೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ರೈತರ ಪರ ನಿಲ್ಲಬೇಕು ಎಂದು ಸಾಸನೂರ ಆಗ್ರಹಿಸಿದರು.
ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಬುಧವಾರ ಸಾಂಕೇತಿಕವಾಗಿ ವಿಜಯಪುರ ನಗರದಲ್ಲಿ ಪ್ರತಿಭಟನೆ ನಡೆಸಲಾಗುವುದು. ಈ ಕುರಿತು ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರುಗಳು ನಿರ್ಧಾರ ತೆಗೆದುಕೊಂಡಿದ್ದೇವೆ ಅಧಿವೇಶನ ಮುಗಿಯುವದರೊಳಗೆ ಬರಪೀಡಿತ ತಾಲೂಕು ಘೊಷಿಸದಿದ್ದರೆ ಸುಮಾರು ೧೦ ಸಾವಿರಕ್ಕೂ ಅಧಿಕ ರೈತರು ಹಾಗೂ ಸಾರ್ವಜನಿಕರನ್ನು ಸಂಘಟಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವದೆಂದು ಅವರು ಎಚ್ಚರಿಕೆ ನೀಡಿದರು.
ನೇತೃತ್ವ ವಹಿಸಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, ಬರಗಾಲದಿಂದ ಸಂಕಷ್ಟಕ್ಕೀಡಾಗಿರುವ ರೈತರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ, ಹೋರಾಟವನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕುವ ಅಥವಾ ರೈತ ಮುಖಂಡರನ್ನು ಬಂಧಿಸುವ ಪ್ರಯತ್ನ ಮಾಡಬಾರದು. ಅಂತಹ ಪ್ರಯತ್ನ ನಡೆದರೆ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ರಾಜ್ಯದಲ್ಲಿ ಲಕ್ಷಾಂತರ ರೈತರು ನಮ್ಮೊಂದಿಗೆ ಇದ್ದಾರೆ. ನಮ್ಮನ್ನು ಹತ್ತಿಕ್ಕುವ ಅಥವಾ ರೈತರ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನ ನಡೆದರೆ ಅದರ ಪರಿಣಾಮ ಇಡೀ ಕರ್ನಾಟಕದಲ್ಲಿ ಪ್ರತಿಧ್ವನಿಸಲಿದೆ. ರೈತರ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಹೋರಾಟವನ್ನು ಅಂತಿಮ ಹಂತದವರೆಗೆ ಕೊಂಡೊಯ್ಯಲಾಗುವುದು ಎಂದು ಹೇಳಿದರು.
ಮುಖಂಡರಾದ ಬಸನಗೌಡ ಯಡಿಯಾಪೂರ, ಬಸನಗೌಡ ಮಾಡಗಿ, ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ ಬಸನಗೌಡ ವಣಕ್ಯಾಳ, ಜೈಸಿಂಗ್ ಮೂಲಿಮನಿ, ಪ್ರಭುಗೌಡ ಅಸ್ಕಿ, ರಾಜುಗೌಡ ಗುಂಡಕನಾಳ, ಎಂ.ಎಂ.ಪಾಟೀಲ, ಶ್ರೀಮತಿ ಸುವರ್ಣಾ ಬಿರಾದಾರ, ಬಸನಗೌಡ ಮಾಡಗಿ, ಸಂಗನಗೌಡ ಹೆಗರಡ್ಡಿ, ಸಾಯಬಣ್ಣ ಆಲ್ಯಾಳ, ಡಾ.ಭಲವಂತ್ರಾಯ ನಡಹಳ್ಳಿ, ರಾಜುಗೌಡ ಕೊಳೂರ, ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಒಳಗೊಂಡು ಮೊದಲಾದವರು ಉಪಸ್ಥಿತರಿದ್ದರು.

