ರೈತರ ಸಹಕಾರವೇ ಕಾರ್ಖಾನೆಯ ಶಕ್ತಿ | ರಿಕವರಿ ಕಡಿಮೆಯಾದರೂ ರೈತರ ಕೈಬಿಡಲ್ಲ | ಭೀಮಾಶಂಕರ ಉಳಿವಿಗೆ ಶಾಸಕ ಯಶವಂತರಾಯಗೌಡ ಒಗ್ಗಟ್ಟಿನ ಕರೆ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಭೀಮಾ ನದಿ ಪಾತ್ರದಲ್ಲಿ ಕಬ್ಬಿನ ರಿಕವರಿ ಪ್ರಮಾಣ ಕಡಿಮೆ ಇರುವುದರಿಂದ ಸಕ್ಕರೆ ಕಾರ್ಖಾನೆ ನಡೆಸುವುದು ಸವಾಲಿನ ಕೆಲಸವಾಗಿದೆ. ಆದರೂ ಈ ಭಾಗದ ರೈತರ ಹಿತದೃಷ್ಟಿಯಿಂದ ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆಯ ಉಳಿವು ಹಾಗೂ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶಕ್ತಿಮೀರಿ ಶ್ರಮಿಸುತ್ತಿದ್ದೇನೆ ಎಂದು ಶಾಸಕ ಹಾಗೂ ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ಹೇಳಿದರು.
ಚಡಚಣ ತಾಲೂಕಿನ ಮರಗೂರ–ಧೂಳಖೇಡದ ಭೀಮಾಶಂಕರ ಸಹಕಾರ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಡೆದ 2025–26ನೇ ಸಾಲಿನ 8ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಹಕಾರ ಕ್ಷೇತ್ರವು ಸರ್ಕಾರದಿಂದ ಸಾಧ್ಯವಾಗದ ಹಲವು ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಯಮಗಳು ಸೇರಿದಂತೆ ವಿವಿಧ ಕಾರಣಗಳಿಂದ ಅನೇಕ ಸಕ್ಕರೆ ಕಾರ್ಖಾನೆಗಳು ಸಂಕಷ್ಟ ಎದುರಿಸುತ್ತಿವೆ. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿಂದ ಕಬ್ಬು ಬೆಳೆದ ರೈತರೂ ಸಮಸ್ಯೆ ಎದುರಿಸುವಂತಾಗಿದೆ. ಕಬ್ಬಿನ ರಿಕವರಿ ಪ್ರಮಾಣವನ್ನು ಪರಿಗಣಿಸಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ 2025–26ನೇ ಸಾಲಿನ ವಾರ್ಷಿಕ ಕಾರ್ಯವರದಿ, ಆರ್ಥಿಕ ಸ್ಥಿತಿಗತಿ, ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನ ಸಿದ್ಧತೆ, ಕೈಗೊಂಡಿರುವ ಆಧುನೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳ ಕುರಿತು ಶೇರುದಾರ ಸದಸ್ಯರು ಹಾಗೂ ರೈತರಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಎಂ.ಆರ್. ಪಾಟೀಲ, ರೇವಗೊಂಡಪ್ಪ ಪಾಟೀಲ, ವಿಶ್ವನಾಥ ಬಿರಾದಾರ, ಬಸಣ್ಣ ಕೋರೆ, ಸಿದ್ದಣ್ಣ ಬಿರಾದಾರ, ಜಟ್ಟೆಪ್ಪ ರವುಳಿ, ಸುರೇಶಗೌಡ ಪಾಟೀಲ, ಅಶೋಕ ಗಜಾಕೋಶ, ಬಸವರಾಜ ಧನಶ್ರೀ, ಅಪ್ಪು ನಡಗೇರಿ, ಸಿದ್ದುಗೌಡ ಬಿರಾದಾರ, ದುಂಡಪ್ಪ ಬೇಡಾ, ಎಸ್.ಕೆ. ಭಾಗ್ಯಶ್ರೀ ಸೇರಿದಂತೆ ರೈತರು, ಶೇರುದಾರರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.
ಅತಿ ಹೆಚ್ಚು ಕಬ್ಬು ಪೂರೈಸಿದ ರೈತರಿಗೆ ಸನ್ಮಾನ
ಕಾರ್ಖಾನೆಗೆ ಅತಿ ಹೆಚ್ಚು ಕಬ್ಬು ಪೂರೈಸಿದ ಶ್ರೀಮಂತ ಇಂಡಿ, ವಿಶ್ವನಾಥ ಧರೆಪ್ಪ, ಬೀರಪ್ಪ ಪೂಜಾರಿ, ಅಮೀನಸಾಬ ಜಾತಗಾರ ಸೇರಿದಂತೆ ಹಲವು ರೈತರನ್ನು ಕಾರ್ಖಾನೆ ವತಿಯಿಂದ ಸನ್ಮಾನಿಸಲಾಯಿತು.

