ಬಸವನಬಾಗೇವಾಡಿಯಲ್ಲಿ ವಿವೇಕ ಬ್ರಿಗೇಡ್ ಸಂಘಟನೆಯಿಂದ ಮನವಿ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿವೇಕ ಬ್ರಿಗೇಡ್ ಸಂಘಟನೆಯಿಂದ ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಧಿಯಡಿ ಸೇರ್ಪಡೆ ಹಾಗೂ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ತಹಸೀಲ್ದಾರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ವಿವೇಕ ಬ್ರಿಗೇಡ್ ಸಂಘಟನೆಯ ಮುಖ್ಯಸ್ಥ ವಿನುತ ಕಲ್ಲೂರ ಮಾತನಾಡಿ, ವಿಜಯಪುರ ಜಿಲ್ಲೆಯನ್ನು ಸಂವಿಧಾನದ 371(ಜೆ) ವಿಧಿಯಡಿ ಸೇರ್ಪಡಿಸಲು ಕಾನೂನಾತ್ಮಕವಾಗಿ ಸಾಧ್ಯವಿದೆ. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿಶೇಷ ರಾಜಕೀಯ ಇಚ್ಛಾಶಕ್ತಿ ಹಾಗೂ ಸಂವಿಧಾನ ತಿದ್ದುಪಡಿಯ ಅಗತ್ಯವಿರುತ್ತದೆ. ಸದ್ಯಕ್ಕೆ ವಿಜಯಪುರ ಜಿಲ್ಲೆಯು ಈ ವ್ಯಾಪ್ತಿಗೆ ಒಳಪಟ್ಟಿಲ್ಲ. ಜಿಲ್ಲೆಯಲ್ಲಿ ಉದ್ಯೋಗ, ಶಿಕ್ಷಣ ಮತ್ತು ಪ್ರಾದೇಶಿಕ ಅಭಿವೃದ್ಧಿಗಾಗಿ 371(ಜೆ) ವ್ಯಾಪ್ತಿಗೆ ತರಬೇಕೆಂಬ ವ್ಯಾಪಕ ಸಾರ್ವಜನಿಕ ಹೋರಾಟಗಳು ಮತ್ತು ಸರ್ಕಾರಕ್ಕೆ ಮನವಿಗಳು ನಿರಂತರವಾಗಿ ಸಲ್ಲಿಕೆಯಾಗುತ್ತಿವೆ. ಇದುವರೆಗೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಜಿಲ್ಲೆಯ ಜನತೆಗೆ ಬೇಸರ ಉಂಟಾಗಿದೆ. ಕೂಡಲೇ ಸರ್ಕಾರ ಆಸಕ್ತಿ ತೋರಿ ವಿಜಯಪುರ ಜಿಲ್ಲೆಯನ್ನು 370ಜೆ ಅಡಿಯಲ್ಲಿ ಸೇರಿಸಿ ಹೈದರಾಬಾದ್ ಕರ್ನಾಟಕ ವ್ಯಾಪ್ತಿಗೆ ಸೇರಿಸಬೇಕೆಂದು ಆಗ್ರಹಿಸಿದರು.
ರಾಜ್ಯದಲ್ಲಿ ಭೀಕರ ಬರಗಾಲ ಉಂಟಾಗಿದೆ. ಬಸವನಬಾಗೇವಾಡಿ ತಾಲೂಕಿನಲ್ಲಿ ಕೂಡ ಭೀಕರ ಬರಗಾಲ ಉಂಟಾಗಿದೆ. ಇಲ್ಲಿಯವರೆಗೆ ಕೇವಲ ನೀರಾವರಿ ಅಭಿವೃದ್ಧಿ ಜಮೀನುಗಳು ಮಾತ್ರ ಬಿತ್ತನೆಯಾಗಿದೆ. ಶೇ. 70ರಿಂದ 80% ಜಮೀನು ಬಿತ್ತನೆಯಾಗಿಲ್ಲ. ತಾಲೂಕಿನ ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಇಲ್ಲದ ಕಾರಣ ರೈತರು ಆರ್ಥಿಕವಾಗಿ ತುಂಬಾ ಕುಗ್ಗಿದ್ದಾರೆ. ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡುವ ಜೊತೆಗೆ ಬೆಳೆ ಪರಿಹಾರವನ್ನು ಕನಿಷ್ಠ ಪ್ರತಿ ಹೆಕ್ಟರಿಗೆ ಒಂದು ಲಕ್ಷ ಕೊಡಬೇಕು. ರೈತರು ಈಗ ತುಂಬಿರುವ ಬೆಳೆ ವಿಮೆ ಮೊತ್ತವನ್ನು ಹೆಚ್ಚಿಸಿ ರೈತರಿಗೆ ಸಂದಾಯ ಮಾಡಬೇಕೆಂದು ಆಗ್ರಹಿಸಿದರು.
ಮನವಿ ಪತ್ರವನ್ನು ಗ್ರೇಡ್-2 ತಹಸೀಲ್ದಾರ ಎಸ್.ಎಚ್.ಅರಕೇರಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರವಿ ಚಿಕ್ಕೊಂಡ, ಮಣಿಕಂಠ ಕಲ್ಲೂರ, ಸಚಿನ ಕಲ್ಲೂರ, ಸುಭಾಸ ಕಲ್ಲೂರ,ಸಚಿನ ಪವಾರ, ಮುರುಗೇಶ ಕೊಟ್ರಶೆಟ್ಟಿ, ಕುಮಾರ ಕೊಟ್ರಶೆಟ್ಟಿ, ಮುರುಗೇಶ ಮಾಲಗಾರ, ಅರುಣ ಮಾಲಗಾರ, ಸುರೇಶ ಗಾಯಕವಾಡ, ಮಲ್ಲು ಬನಾಸಿ, ಶಿವು ಬಟ್ಟಲ ಇತರರು ಇದ್ದರು.

