ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯೋಗದಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಯೋಗ ಶಿಕ್ಷಕ ಮಡಿವಾಳಪ್ಪ ಪರಸಪ್ಪ ದೊಡಮನಿ ಅವರಿಗೆ ಎಷಿಯನ್ ಫೆಸಿಪಿಕ್ ಐಕಾನ್ ಅವಾರ್ಡ್ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಗುರುವಾರ ಅವರನ್ನು ಅಭಿನಂದಿಸಿ ಶಾಸಕರು ಮಾತನಾಡಿದರು.
ವಿದ್ಯಾರ್ಥಿ ದೆಸೆಯಿಂದಲೇ ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ನಿಯಂತ್ರಣ ಕರಗತ ಮಾಡಿಕೊಳ್ಳಬಹುದು. ಇದರಿಂದ ಏಕಾಗ್ರತೆ ಹೆಚ್ಚಾಗಲಿದ್ದು, ದೈಹಿಕವಾಗಿಯೂ ಉತ್ತಮ ಆರೋಗ್ಯ ಹೊಂದಲು ಸಾಧ್ಯ. ದೊಡಮನಿ ಅವರು ಯೋಗದಲ್ಲಿ ಅವರದೇ ಆದ ಛಾಪು ಮೂಡಿಸಿದ್ದಾರೆ. ದೇಶದಲ್ಲಷ್ಟೇ ಅಲ್ಲ, ವಿದೇಶಗಳಲ್ಲಿಯೂ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯುವ ಮೂಲಕ ಬಸವನಾಡಿಗೆ ಹೆಮ್ಮೆ ತಂದಿದ್ದಾರೆ. ಅವರ ಯೋಗ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುವುದು. ಅವರ ಭವಿಷ್ಯದ ಯೋಜನೆಗಳು ಯಶಸ್ವಿಯಾಗಲಿ ಎಂದು ಸುನೀಲಗೌಡ ಪಾಟೀಲ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಡಿವಾಳಪ್ಪ ಪರಸಪ್ಪ ದೊಡಮನಿ, ಕಳೆದ 16 ವರ್ಷಗಳಿಂದ ಯೋಗಾಭ್ಯಾಸ ನಿರತನಾಗಿದ್ದೇನೆ. ಆರು ವರ್ಷಗಳಿಂದ ಬಿ.ಎಲ್.ಡಿ.ಇ ಡೀಮ್ಡ್ ವಿವಿಯಲ್ಲಿ ಯೋಗ ಶಿಕ್ಷಕನಾಗಿ ತರಬೇತಿ ನೀಡುತ್ತಿದ್ದೇನೆ. ಬಿ.ಎ ಪದವಿ, ಪಿಜಿ ಡಿಪ್ಲೋಮಾ ಇನ್ ಯೋಗ, ಸರ್ಟಿಫಿಕೇಟ್ ಯೋಗಾ ಸ್ಟಡೀಸ್(ಸಿವೈಎಸ್), ಯೋಗ ಇನಸ್ಟ್ರಕ್ಟರ್ ಕೋರ್ಸ್(ವೈಐಸಿ) ಅಧ್ಯಯನ ಮಾಡಿದ್ದೇನೆ. ನೇಪಾಳದಲ್ಲಿ ಯೋಗದಲ್ಲಿ ಗೌರವ ಪದವಿ ಪಡೆದಿದ್ದೇನೆ. ವಿಯಟ್ನಾಂ ನಲ್ಲಿ ತರಬೇತುದಾರನಾಗಿ ಸೇವೆ ಸಲ್ಲಿಸಿದ್ದೇನೆ. 2023ರಲ್ಲಿ ಥೈಲ್ಯಾಂಡ್ ನಲ್ಲಿ ಮತ್ತು 2024ರಲ್ಲಿ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ಸ್ಪರ್ಥೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದೇನೆ. 2025ರಲ್ಲಿ ಮಲೇಶಿಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದೇನೆ. 2018ರಲ್ಲಿ ರಾಮದೇವ ಬಾಬಾ ನಗದು ಪುರಸ್ಕಾರ ದೊರೆತಿದೆ. ಸೆಪ್ಟೆಂಬರ್ 7 ರಂದು ಥೈಲ್ಯಾಂಡ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಷಿಯನ್ ಫೆಸಿಪಿಕ್ ಐಕಾನ್ ಅವಾರ್ಡ್ ಬಂದಿದೆ. ಈವರೆಗೆ ಸುಮಾರು 20 ಪ್ರಶಸ್ತಿಗಳು ಬಂದಿದ್ದು, ದೇಶದ ನಾನಾ ರಾಜ್ಯಗಳಲ್ಲಿ ತರಬೇತುದಾರ ಮತ್ತು ನಿರ್ಣಾಯಕರಾಗಿ ಸೇವೆ ಸಲ್ಲಿಸಿದ್ದೇನೆ. ನನ್ನ ಸಾಧನೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿವಿ ಬೆನ್ನೆಲುಬಾಗಿ ನಿಂತಿದೆ ಎಂದು ಸಂತಸ ಹಂಚಿಕೊಂಡರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿ ಎಂ. ಎನ್. ಚೋರಗಸ್ತಿ, ಹಣಕಾಸು ಉಪಅಧಿಕಾರಿ ಯಲ್ಲಾಲಿಂಗ ಜನವಾಡ, ಶ್ರೀ ಬಿ. ಎಂ. ಪಾಟೀಲ ಐಸಿಎಸ್ಇ ಶಾಲೆಯ ಪ್ರಾಚಾರ್ಯ ವಿಕ್ರಂ ನಾರ್ವೆಕರ, ಸಿಬಿಎಸ್ಇ ಶಾಲೆಯ ಪ್ರಭಾರ ಪ್ರಾಚಾರ್ಯೆ ವಸುದಾ ನಾರ್ವೆಕರ, ಕೋ-ಆರ್ಡಿನೇಟರ್ ಗಳಾದ ದೀಪಾ ಜಂಬೂರೆ, ಜಯಾ ಗಲಗಲಿ ಉಪಸ್ಥಿತರಿದ್ದರು.

