ವೈದ್ಯರ ತವರೂರಾಗುತ್ತಿದೆ ಚಡಚಣ ತಾಲೂಕಿನ ನಿವರಗಿ ಗ್ರಾಮ | ಒಂದೇ ಗ್ರಾಮದಲ್ಲಿ ನಾಲ್ವರಿಗೆ ಎಮ್‌ಬಿಬಿಎಸ್ ಪ್ರವೇಶ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪ್ರತಿಭೆ, ಪರಿಶ್ರಮ ಹಾಗೂ ಛಲಕ್ಕೆ ಗ್ರಾಮೀಣ ಹಿನ್ನೆಲೆ ಅಡ್ಡಿಯಾಗುವುದಿಲ್ಲ ಎಂಬುದನ್ನು ಚಡಚಣ ತಾಲೂಕಿನ ನಿವರಗಿ ಗ್ರಾಮದ ನಾಲ್ವರು ಪ್ರತಿಭಾವಂತ ವಿದ್ಯಾರ್ಥಿಗಳು ಸಾಬೀತುಪಡಿಸಿದ್ದಾರೆ.
ಒಂದೇ ವರ್ಷದಲ್ಲಿ ಗ್ರಾಮದ ನಾಲ್ವರು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಎಮ್‌ಬಿಬಿಎಸ್ ಅರ್ಹತೆ ಪಡೆದು ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಎಮ್‌ಬಿಬಿಎಸ್ ಪ್ರವೇಶ ಪಡೆಯುವ ಮೂಲಕ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ.
ನಿವರಗಿ ಗ್ರಾಮದ ವಿದ್ಯಾರ್ಥಿಗಳಾದ ನೂತನ ಬಸವರಾಜ ಹಳದಕಿ ಅವರು ಬಾಗಲಕೋಟೆಯ ಎಸ್. ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನಲ್ಲಿ ಎಮ್‌ಬಿಬಿಎಸ್ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆ. ಅಮಿತ್‌ಗೌಡ ಸಂಗನಗೌಡ ಪಾಟೀಲ ಅವರು ಮಹಾರಾಷ್ಟ್ರದ ಸಾಂಗ್ಲಿಯ ಭಾರತಿ ವಿದ್ಯಾಪೀಠ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಆಯ್ಕೆಯಾಗಿದ್ದಾರೆ.
ಅದೇ ರೀತಿ ಗೌರಿಶಂಕರ ಮಲ್ಲಿಕಾರ್ಜುನ ಪೊಲಾದಿ ಅವರು ಮಂಡ್ಯದ ಆದಿಚುಂಚನಗಿರಿ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ಸಿಂಚನಾ ಯಲ್ಲಪ್ಪ ಬಗಲಿ ಅವರು ಗದಗ ಮೆಡಿಕಲ್ ಕಾಲೇಜಿನಲ್ಲಿ ಎಮ್‌ಬಿಬಿಎಸ್ ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆ.
ಒಂದೇ ವರ್ಷದಲ್ಲಿ ಒಂದೇ ಗ್ರಾಮದ ನಾಲ್ವರು ವಿದ್ಯಾರ್ಥಿಗಳು ನೀಟ್ ಮೂಲಕ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿರುವುದು ನಿವರಗಿ ಗ್ರಾಮದ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ ಮೂಡಿಸಿದೆ.
ಶಿಕ್ಷಕರ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ನಿವರಗಿ ಗ್ರಾಮ ಇದೀಗ ವೈದ್ಯರನ್ನು ರೂಪಿಸುವ ತವರೂರಾಗಿಯೂ ಗುರುತಿಸಿಕೊಳ್ಳುತ್ತಿರುವುದು ಗ್ರಾಮಸ್ಥರಲ್ಲಿ ಹೆಮ್ಮೆಯ ಭಾವ ಮೂಡಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ನಿವರಗಿ ಗ್ರಾಮದ ನೌಕರರ ಬಳಗ, ಗ್ರಾಮಸ್ಥರು ಹಾಗೂ ಹಿರಿಯರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.

