ಬಾಗಲಕೋಟೆ ನೂತನ ಜಿಲ್ಲಾ ಅಧ್ಯಕ್ಷ ದಯಾನಂದ ಪಾಟೀಲರಿಗೆ ಜಮಖಂಡಿಯಲ್ಲಿ ಆತ್ಮೀಯ ಸನ್ಮಾನ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿ ನಿಯೋಜನೆಗೊಂಡ ಬಳಿಕ ಪ್ರಥಮ ಬಾರಿಗೆ ಜಮಖಂಡಿಗೆ ಆಗಮಿಸಿದ ದಯಾನಂದ ಪಾಟೀಲ ಅವರನ್ನು ಮಾಜಿ ಶಾಸಕ ಆನಂದ ನ್ಯಾಮಗೌಡ ಅವರ ಗೃಹ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ, ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಆನಂದ ನ್ಯಾಮಗೌಡ ಅವರು ಮಾತನಾಡಿ, ದಯಾನಂದ ಪಾಟೀಲ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿರುವುದು ಪಕ್ಷದ ಸಂಘಟನೆಗೆ ಮತ್ತಷ್ಟು ಬಲ ನೀಡುವ ವಿಶ್ವಾಸ ಮೂಡಿಸಿದೆ. ಅವರ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಪಕ್ಷವನ್ನು ಇನ್ನಷ್ಟು ಬಲಿಷ್ಠವಾಗಿ ಹಾಗೂ ಸಂಘಟಿತವಾಗಿ ಕಟ್ಟುವ ಕಾರ್ಯಕ್ಕೆ ವೇಗ ಸಿಗಲಿ ಎಂದು ಶುಭ ಹಾರೈಸಿದರು.
“ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜನಪರ ಕಾರ್ಯಗಳಿಗೆ ಮತ್ತಷ್ಟು ವೇಗ ದೊರೆಯುವಂತಾಗಲಿ” ಎಂದು ಆಶಿಸಿದರು.
ಸನ್ಮಾನ ಸ್ವೀಕರಿಸಿದ ದಯಾನಂದ ಪಾಟೀಲ ಅವರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತೋರಿದ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದರು. ಎಲ್ಲರ ಸಹಕಾರದೊಂದಿಗೆ ಪಕ್ಷ ಸಂಘಟನೆಗೆ ಆದ್ಯತೆ ನೀಡಿ, ಜನಪರವಾಗಿ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ನೂತನ ಜಿಲ್ಲಾ ಅಧ್ಯಕ್ಷರಿಗೆ ಶುಭಾಶಯ ಕೋರಿದರು.

