ಉದಯರಶ್ಮಿ ದಿನಪತ್ರಿಕೆ
ಅಥಣಿ: ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ, ಆತ್ಮವಿಶ್ವಾಸ ಹಾಗೂ ಉದ್ಯೋಗಾರ್ಹತೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಥಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ದೇಶಪಾಂಡೆ ಸ್ಕಿಲ್ಲಿಂಗ್ ಸಹಯೋಗದಲ್ಲಿ ಆರ್ ಸಿ ಯು – ಏಪ್ ಈ ಎಸ್ ಎಮ್ ಎ (ಫೆಸ್ಮಾ)S3 ಬ್ಯಾಚ್‌ನ ಉದ್ಘಾಟನೆ ಹಾಗೂ ಪೋಷಕರ ಸಭೆ ಯಶಸ್ವಿಯಾಗಿ ನಡೆಯಿತು.
ಬಿಎ ಬಿಕಾಂ ಬಿಸಿಎ ಹಾಗೂ ಬಿಬಿಎ ಅಂತಿಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯಾಧಾರಿತ ತರಬೇತಿ ಪಡೆಯುವ ಅಗತ್ಯದ ಕುರಿತು ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಉದ್ಯೋಗ ಘಟಕದ ಸಹ-ಸಂಯೋಜಕರಾದ ಡಾ.ಶಿಲ್ಪಾ ರಾಮನ್ನಗೊಳ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪದವಿ ಶಿಕ್ಷಣದೊಂದಿಗೆ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಸಂತೋಷ್ ಉಂಡಾಡಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶೈಕ್ಷಣಿಕ ಅರ್ಹತೆಯೊಂದಿಗೆ ಸಂವಹನ ಕೌಶಲ್ಯ, ನಾಯಕತ್ವ ಗುಣ, ತಾಂತ್ರಿಕ ಜ್ಞಾನ ಹಾಗೂ ವ್ಯಕ್ತಿತ್ವ ವಿಕಸನಕ್ಕೂ ವಿದ್ಯಾರ್ಥಿಗಳು ಆದ್ಯತೆ ನೀಡಬೇಕು. ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಆರ್ ಸಿ ಯು ಏಪ್ ಈ ಎಸ್ ಎಮ್ ಎ
ತರಬೇತುದಾರರಾದ ಸ್ಪಂದನಾ ಎಸ್.ಜೆ. ಮಾತನಾಡಿ, ವಿದ್ಯಾರ್ಥಿಗಳ ಕೌಶಲ್ಯಗಳನ್ನು ಗುರುತಿಸಿ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದು ತರಬೇತಿಯ ಪ್ರಮುಖ ಉದ್ದೇಶವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಲಾಸ್ ಕಾಂಬಳೆ ಮಾತನಾಡಿ, ಪ್ರಸ್ತುತ ಉದ್ಯೋಗ ಕ್ಷೇತ್ರದಲ್ಲಿ ಪದವಿಯ ಜೊತೆಗೆ ಕೌಶಲ್ಯಕ್ಕೂ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ಈ ತರಬೇತಿ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವಿ ಬಿ ಮಠಪತಿ, ಪರಶುರಾಮ ತಕತರಾವ, ಸುರೇಖಾ ದೇವರಡ್ಡಿ, ಅಪ್ಪು ಮಾದರ, ಶಿವಾನಂದ ಹೊಸಮನಿ, ರಾಜು ಭಜಂತ್ರಿ, ಮಲ್ಲಿಕಾರ್ಜುನ ಪಾಟೀಲ, ತರಬೇತುದಾರರಾದ ವಂದನಾ ಎಸ್ ಪಿ, ಸ್ಪಂದನಾ ಎಸ್ ಜೆ ಸೇರಿದಂತೆ ಹಲವರಿದ್ದರು.

