ಉದಯರಶ್ಮಿ ದಿನಪತ್ರಿಕೆ
ತಿಕೋಟಾ: 2026–27ನೇ ಸಾಲಿನ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವು ತಿಕೋಟಾ ತಾಲ್ಲೂಕಿನ ಕನಮಡಿ ಗ್ರಾಮದ ಶ್ರೀ ವರಸಿದ್ದಿ ವಿನಾಯಕ ಶಾಲೆಯಲ್ಲಿ ನಡೆಯಿತು. ಕ್ರೀಡಾಕೂಟದಲ್ಲಿ ಕನಮಡಿಯ ತುಂಗಲ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ವಿವಿಧ ವೈಯಕ್ತಿಕ ಹಾಗೂ ಗುಂಪು ಆಟಗಳ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.
ವೈಯಕ್ತಿಕ ಸ್ಪರ್ಧೆ: ಚಕ್ರ ಎಸೆತದಲ್ಲಿ ರಾಮಗೊಂಡ ದೇವನಾಯಕ ಪ್ರಥಮ ಸ್ಥಾನ, 100 ಮೀಟರ್ ಓಟದಲ್ಲಿ ಅರಮಾನ ಸೌದಿ ದ್ವಿತೀಯ ಸ್ಥಾನ, 600 ಮೀಟರ್ ಓಟದಲ್ಲಿ ಶ್ರೀಲಕ್ಷ್ಮೀ ಹನಗಂಡಿ ತೃತೀಯ ಸ್ಥಾನ ಹಾಗೂ ಚಕ್ರ ಎಸೆತದಲ್ಲಿ ನಂದೀಶ ಮೈಸೂರು ತೃತೀಯ ಸ್ಥಾನ ಪಡೆದಿದ್ದಾರೆ.
ಗಂಡು ಮಕ್ಕಳ ಗುಂಪು ಆಟಗಳಲ್ಲಿ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಹೆಣ್ಣು ಮಕ್ಕಳ ಗುಂಪು ಆಟಗಳಲ್ಲಿ ವಾಲಿಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಥ್ರೋಬಾಲ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ತುಂಗಳ ಇಂಟರ್‌ನ್ಯಾಷನಲ್ ಸ್ಕೂಲ್‌ನ ಅಧ್ಯಕ್ಷ ಎಂ.ಆರ್. ತುಂಗಳ, ವಿಜಯಕುಮಾರ ತುಂಗಲ, ವಾಣಿ ವಿ. ತುಂಗಲ, ಪ್ರಾಂಶುಪಾಲೆ ಡಾ. ವಿನಿತಾ ಕೆ., ಉಪಪ್ರಾಂಶುಪಾಲ ಅರುಣಕುಮಾರ, ಕೆ.ಜಿ. ಸಂಯೋಜಕಿ ನವಿನಾ ವಿ.ಕೆ. ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ವಿಷ್ಣು ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ.
ವಿದ್ಯಾರ್ಥಿಗಳ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಸೂಕ್ತ ತರಬೇತಿ ಹಾಗೂ ಪ್ರೋತ್ಸಾಹ ನೀಡುತ್ತಿರುವ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರ ಕಾರ್ಯಕ್ಕೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

