ವಿಜಯಪುರದಲ್ಲಿ ಕಲಾವಿದೆ ಸವಿತಾ ಜಾದವ ಅವರ ಕಲಾಕೃತಿಗಳ ಪ್ರದರ್ಶನ ಉದ್ಘಾಟನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಚಿತ್ರಕಲೆಯು ಕನ್ನಡ ನಾಡಿನ ಸಾಂಸ್ಕೃತಿಕ ಅಸ್ಮಿತೆಯಾಗಿದೆ. ಚಿತ್ರಕಲಾವಿದರು ನಾಡಿನ ಸಾಂಸ್ಕೃತಿಕ ಪರಂಪರೆಗೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ವಿಜಯಪುರದ ಯುವ ಕಲಾವಿದೆ ಶ್ರೀಮತಿ ಸವಿತಾ ಜಾದವ ಅವರ ಕಲಾಕೃತಿಗಳು ಹಲವಾರು ವೈಶಿಷ್ಟ್ಯಗಳಿಂದ ಕೂಡಿವೆ. ನಿಸರ್ಗ ಚಿತ್ರ ರೇಖಾ ಚಿತ್ರಗಳು ಸಾಂಪ್ರದಾಯಕ ಶೈಲಿ ಹೀಗೆ ಹಲವಾರು ವೈವಿಧ್ಯಮಯ ಕಲಾಕೃತಿಗಳ ಪ್ರದರ್ಶನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಧನಸಹಾಯದೊಂದಿಗೆ ಏರ್ಪಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಎಂದು ಪ್ರೇರಣಾ ಶಾಲೆಯ ಕನ್ನಡ ಶಿಕ್ಷಕಿ ವಿದ್ಯಾಶ್ರೀ ಶಿರನಾಳ ಹೇಳಿದರು.
ಅವರು ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಕಲಾವಿದೆ ಸವಿತಾ ಜಾದವ ಅವರ ಕಲಾಕೃತಿಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ, ಕಲಾ ಇತಿಹಾಸಕಾರರು ಆದ ಡಾ. ವಿ.ಎಂ. ಭಾಗಯತ್ ಅವರು ಮಾತನಾಡುತ್ತಾ, ವಿಜಯಪುರ ಆದಿಲ್ ಶಾಹಿ ಕಾಲದಿಂದಲೂ ಚಿತ್ರಕಲೆಯಲ್ಲಿ ತನ್ನದೇ ಆದ ಮಹತ್ವದ ಪರಂಪರೆ ಹೊಂದಿದೆ. ಇಂತಹ ನಾಡಿನ ಕಲಾವಿದರು ನಾಡಿನ ಉದ್ದಗಲಕ್ಕೂ ತಮ್ಮ ಕಲಾಕೃತಿಗಳ ಮೂಲಕ ವಿಜಯಪುರದ ಪರಂಪರೆ ಮುನ್ನಡೆಸುತ್ತಿದ್ದಾರೆ. ಇಂಥ ಕಾರ್ಯಕ್ಕೆ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಪ್ರೋತ್ಸಾಹ ನೀಡುತ್ತಿರುವುದು ಅತ್ಯಂತ ಮಹತ್ವದ್ದಾಗಿದೆ. ಕಲಾವಿದೆ ಸವಿತಾ ಅವರು ತಮ್ಮದೇ ಆದ ಶೈಲಿಯಲ್ಲಿ ಕಲಾಕೃತಿಗಳನ್ನು ರಚಿಸುತ್ತ ಉತ್ತಮ ಕಲಾವಿದೆಯಾಗಿ ತಮ್ಮ ಕಲಾಕೃತಿಗಳ ಮೂಲಕ ವಿಜಯಪುರದ ಹೆಮ್ಮೆಯನ್ನು ಕಲಾಸಕ್ತರಿಗೆ ಉಣಬಡಿಸುತ್ತಿದ್ದಾರೆ. ಇವರು ಪರಿಶ್ರಮದಿಂದ ಕಲಾಕೃತಿಗಳ ರಚನೆ ನಿರಂತರವಾಗಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಕಲಾವಿದರಾದ ಪಿ. ಎಸ್ ಕಡೇಮನಿ ಅವರು ಮಾತನಾಡುತ್ತಾ, ನಮ್ಮ ಜಿಲ್ಲೆಯು ಕಲೆ, ಸಾಹಿತ್ಯ, ಸಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಜಿಲ್ಲೆಯಲ್ಲಿ ರಾಷ್ಟ್ರ ಅಂತರಾಷ್ಟ್ರೀಯ, ಮತ್ತು ರಾಜ್ಯಮಟ್ಟದ ಹಲವರು ಕಲಾವಿದರು ಇದ್ದರೂ ಮಹಿಳಾ ಕಲಾವಿದರ ಸಂಖ್ಯೆ ಕಡಿಮೆ ಇದೆ. ಅದರಲ್ಲಿ ಸವಿತಾ ಜಾಧವ ಅವರು ತಮ್ಮ ಉತ್ತಮ ಕಲಾಕೃತಿಗಳನ್ನು ರಚಿಸುವ ಮೂಲಕ ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ. ಕಲಾವಿದೆಯ ಜೊತೆಗೆ ಕಲಾಶಿಕ್ಷಕಿಯಾಗಿಯೂ ಮಕ್ಕಳಲ್ಲಿ ಕಲಾ ಪ್ರಜ್ಞೆ ಮೂಡಿಸುವಲ್ಲಿ ಸಕ್ರಿಯರಾಗಿದ್ದಾರೆ. ಇಂಥಾ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ನೀಡಿ ಪ್ರೋತ್ಸಾಹಿಸುತ್ತಿರುವುದು ಸಂತೋಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ವಿದ್ಯಾಧರ ಸಾಲಿ, ಬಿ.ಎಸ್.ಪಾಟೀಲ, ವಿ.ವಿ.ಹಿರೇಮಠ, ಎಂ. ಕೆ ಪತ್ತಾರ, ಗಂಗಾಧರ ಮಾಯಾಚಾರಿ, ಲಿಂಗರಾಜ ಕಾಚಾಪೂರ, ಪ್ರಶಾಂತ್ ಮನಗೂಳಿ, ಶಬ್ಬೀರ್ ನದಾಫ್, ಕೃಷ್ಣಾ ಮಾನೆ, ಸಹಿತ ಹಲವಾರು ಕಲಾವಿದರು, ಕಲಾಸಕ್ತರು ಇದ್ದರು.
ಕಲಾವಿದ ರಮೇಶ ಚವ್ಹಾಣ ಪ್ರಾಸ್ತಾವಿಕವಾಗಿ ಮಾತನಾಡಿ, ನಿರೂಪಣೆ ಮಾಡಿದರು. ಹಿರಿಯ ಕಲಾವಿದ ವಿದ್ಯಾಧರ ಸಾಲಿ ವಂದನಾರ್ಪಣೆ ನೆರವೇರಿಸಿದರು.

