ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರಶಾಂತ ಕುಲಕರ್ಣಿ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಹಿಳೆಯರು ತಮ್ಮಲ್ಲಿರುವ ಕೌಶಲ್ಯ ಹಾಗೂ ಪ್ರತಿಭೆಯನ್ನು ಗುರುತಿಸಿಕೊಂಡು ಅದನ್ನು ಉದ್ಯಮವಾಗಿ ಪರಿವರ್ತಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಪ್ರಶಾಂತ ಕುಲಕರ್ಣಿ ಹೇಳಿದರು.
ನಗರದ ಜಿ.ಪಿ. ಪೋರವಾಲ್ ಕಲಾ ವಾಣಿಜ್ಯ ಹಾಗೂ ವಿ ವಿ ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಮಹಿಳಾ ಘಟಕದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ‘ಮಹಿಳಾ ಸಬಲೀಕರಣಕ್ಕೆ ಉದ್ಯಮಶೀಲತೆಯ ಅಗತ್ಯತೆ’ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳಾ ಸಬಲೀಕರಣವೆಂದರೆ ಪುರುಷರೊಂದಿಗೆ ಸ್ಪರ್ಧಿಸುವುದಲ್ಲ. ಬದಲಾಗಿ ಶಿಕ್ಷಣ, ಜ್ಞಾನ, ಆರ್ಥಿಕ ಸ್ವಾವಲಂಬನೆ ಹಾಗೂ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದುವುದಾಗಿದೆ. ಮಹಿಳೆಯರಲ್ಲಿರುವ ಕೌಶಲ್ಯಕ್ಕೆ ಸೂಕ್ತ ತರಬೇತಿ ಮತ್ತು ಮಾರುಕಟ್ಟೆ ಸಂಪರ್ಕ ದೊರೆತರೆ ಅದೇ ಕೌಶಲ್ಯ ಕುಟುಂಬದ ಆದಾಯದ ಮೂಲವಾಗುವುದರ ಜತೆಗೆ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನೂ ಹೊಂದಿದೆ ಎಂದರು.
ಗ್ರಾಮೀಣ ಪ್ರದೇಶದ ಮಹಿಳೆಯರು ಕೃಷಿ, ಹೈನುಗಾರಿಕೆ, ಆಹಾರ ಸಂಸ್ಕರಣೆ, ಹೊಲಿಗೆ, ಕರಕುಶಲ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುಭವ ಮತ್ತು ಕೌಶಲ್ಯ ಹೊಂದಿದ್ದಾರೆ. ಹಪ್ಪಳ, ಉಪ್ಪಿನಕಾಯಿ, ಮಸಾಲೆ ಪದಾರ್ಥ, ರಾಗಿ ಉತ್ಪನ್ನಗಳ ತಯಾರಿಕೆ ಸೇರಿದಂತೆ ಮನೆಯಲ್ಲೇ ನಡೆಯುವ ಚಟುವಟಿಕೆಗಳನ್ನು ಸೂಕ್ತ ರೀತಿಯಲ್ಲಿ ರೂಪಿಸಿ ಮಾರುಕಟ್ಟೆಗೆ ಪರಿಚಯಿಸಿದರೆ ಅವು ಯಶಸ್ವಿ ಉದ್ಯಮಗಳಾಗಬಹುದು. ಇದಕ್ಕೆ ಬಂಡವಾಳದ ಜತೆಗೆ ತರಬೇತಿ, ತಂತ್ರಜ್ಞಾನ, ಮಾರುಕಟ್ಟೆ ಹಾಗೂ ಕುಟುಂಬದ ಪ್ರೋತ್ಸಾಹ ಅಗತ್ಯ ಎಂದು ತಿಳಿಸಿದರು.
ಮಹಿಳೆಯರ ಆರ್ಥಿಕ ಸಬಲೀಕರಣದಲ್ಲಿ ಸ್ವಸಹಾಯ ಸಂಘಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ಸ್ತ್ರೀ ಶಕ್ತಿ, ಸಂಜೀವಿನಿ, ಉದ್ಯೋಗಿನಿ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳನ್ನು ಮಹಿಳೆಯರು ಸದುಪಯೋಗಪಡಿಸಿಕೊಳ್ಳಬೇಕು. ಕೇವಲ ಉದ್ಯೋಗ ಪಡೆಯುವುದಕ್ಕಿಂತ ಉದ್ಯೋಗ ಸೃಷ್ಟಿಸುವ ಮನೋಭಾವವನ್ನು ಯುವತಿಯರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
“ಉದ್ಯಮದ ಮೊದಲ ಲಾಭ ಹಣವಲ್ಲ; ಆತ್ಮವಿಶ್ವಾಸ. ಮಹಿಳೆಯ ಕೈಯಲ್ಲಿರುವ ಕೌಶಲ್ಯ ಉದ್ಯಮವಾಗಲಿ, ಉದ್ಯಮ ಆದಾಯವಾಗಲಿ, ಆದಾಯ ಸ್ವಾವಲಂಬನೆಯಾಗಲಿ” ಎಂದು ಪ್ರಶಾಂತ ಕುಲಕರ್ಣಿ ಹೇಳಿದರು.
ಮಹಿಳಾ ಘಟಕದ ಸಂಯೋಜಕಿ ಪ್ರತಿಕಾ ತಳವಾರ, ಐಕ್ಯೂಎಸಿ ಘಟಕದ ಮುಖ್ಯಸ್ಥ ಬಸವರಾಜ ಮಹಾಜನಶೆಟ್ಟಿ, ಕಾಲೇಜಿನ ಬೋಧಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

