ಹೊಳಲ್ಕೆರೆ ಸಮಗ್ರ ನೀರಾವರಿ ಯೋಜನೆಗೆ ಒತ್ತು ನೀಡುವ ವಿಶ್ವಾಸ
ಉದಯರಶ್ಮಿ ದಿನಪತ್ರಿಕೆ
ಹೊಳಲ್ಕೆರೆ: ಅರೆ ಮಲೆನಾಡು ಪ್ರದೇಶವಾದ ಹೊಳಲ್ಕೆರೆ ತಾಲೂಕಿಗೆ ಸಮಗ್ರ ನೀರಾವರಿ ಯೋಜನೆ ಜಾರಿಗೊಳಿಸಲು ಶಾಸಕ ಡಾ. ಎಂ. ಚಂದ್ರಪ್ಪ ಅವರು ಒತ್ತು ನೀಡಲಿದ್ದಾರೆ. ಈ ಕುರಿತು ಅವರೊಂದಿಗೆ ತಾವು ಕೂಡ ಚರ್ಚಿಸುವುದಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದರು.
ತಾಲೂಕಿನ ಬೊಮ್ಮನಹಳ್ಳಿ ಬಳಿ ಭದ್ರಾ ಮೇಲ್ದಂಡೆ ಶಾಖಾ ಕಾಲುವೆಗೆ ಶುಕ್ರವಾರ ಬಾಗಿನ ಅರ್ಪಿಸಿ, ಜಕ್ಕನಹಳ್ಳಿ ಜಂಕ್ಷನ್‌ನ ತೊಟ್ಟಿ ವೀಕ್ಷಿಸಿದ ಬಳಿಕ ಅವರು ಮಾತನಾಡಿದರು.
ಬಯಲುಸೀಮೆ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಹರಿಯುತ್ತಿರುವುದನ್ನು ನೋಡಿದಾಗ ತುಂಬಾ ಸಂತೋಷವಾಗುತ್ತಿದೆ. ನೀರು ಹರಿಯುವುದನ್ನು ಕಣ್ತುಂಬಿಕೊಳ್ಳಲು ಜನರು ಕುಟುಂಬ ಸಮೇತರಾಗಿ ಬರುತ್ತಿರುವುದು ಈ ಯೋಜನೆಯ ಮಹತ್ವವನ್ನು ತೋರಿಸುತ್ತದೆ ಎಂದರು.
ಚಿತ್ರದುರ್ಗ ಜಿಲ್ಲೆಗೆ ಭದ್ರಾ ಯೋಜನೆ ಜಾರಿಗೊಳಿಸುವುದು ದಶಕಗಳ ಕನಸಾಗಿತ್ತು. ನೀರಾವರಿ ಹೋರಾಟ ಸಮಿತಿ ರಚಿಸುವ ಮೂಲಕ ಈ ಹೋರಾಟಕ್ಕೆ ಮೊದಲ ಹೆಜ್ಜೆ ಇಟ್ಟವರು ಪತ್ರಕರ್ತರು ಎನ್ನುವುದು ನಮಗೆ ಹೆಮ್ಮೆಯ ಸಂಗತಿ. ನಂತರ ರೈತ ಸಂಘಟನೆಗಳು, ರಾಜಕೀಯ ಮುತ್ಸದ್ದಿಗಳು ಹಾಗೂ ವಿವಿಧ ಸಂಘಟನೆಗಳು ಕೈಜೋಡಿಸಿ ನಡೆಸಿದ ಹೋರಾಟದ ಫಲವಾಗಿ ಇಂದು ಭದ್ರಾ ನೀರು ಜಿಲ್ಲೆಗೆ ಹರಿಯುವಂತಾಗಿದೆ. ಇದೊಂದು ಐತಿಹಾಸಿಕ ಕ್ಷಣ ಎಂದು ಬಣ್ಣಿಸಿದರು.
ಸಮಗ್ರ ನೀರಾವರಿ ಯೋಜನೆಯ ಕೆಲವು ಅಂಶಗಳನ್ನು ಅವಲೋಕಿಸಿದಾಗ ಹೊಳಲ್ಕೆರೆ ತಾಲೂಕಿಗೆ ಒಂದಿಷ್ಟು ಅನ್ಯಾಯವಾಗಿರುವುದು ಕಂಡುಬರುತ್ತದೆ. ಸದ್ಯ ಹರಿಯುತ್ತಿರುವ ನೀರು ಪ್ರಾಯೋಗಿಕ ಹಂತದಲ್ಲಿದೆ. ಶಾಸಕ ಡಾ. ಎಂ. ಚಂದ್ರಪ್ಪ ಅವರು ಉತ್ಸಾಹಿ ಹಾಗೂ ರೈತರು ಮತ್ತು ಕ್ಷೇತ್ರದ ಜನರ ಹಿತ ಬಯಸುವವರಾಗಿದ್ದು, ಮುಂದಿನ ವರ್ಷ ಭದ್ರಾ ನೀರು ಹರಿಯುವಷ್ಟರಲ್ಲಿ ಹೊಳಲ್ಕೆರೆ ತಾಲೂಕನ್ನು ಸಮಗ್ರ ನೀರಾವರಿ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ವಿಶ್ವಾಸವಿದೆ ಎಂದರು.
ರೈತ ಮುಖಂಡ ಚನ್ನಸಮುದ್ರ ದಾನವೇಂದ್ರ, ನಿವೃತ್ತ ಸೈನಿಕ ಅರಭಘಟ್ಟ ಮಿಲಿಟರಿ ಮಲ್ಲೇಶ್ ಮಾತನಾಡಿ, ಜಿಲ್ಲೆಗೆ ಭದ್ರಾ ನೀರು ಹರಿಯುವುದು ಕನಸಿನ ಮಾತು ಎಂಬ ಭಾವನೆಯಿತ್ತು. ಇದೀಗ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಭದ್ರಾ ನೀರು ಹರಿದಿರುವುದು ಅಪಾರ ಸಂತಸ ತಂದಿದೆ ಎಂದರು.

