ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪಟ್ಟಣದ ಸೌಹಾರ್ದ ಹಾಗೂ ಐತಿಹಾಸಿಕ ಪರಂಪರೆಯ ಸಂಕೇತವಾಗಿ ನೂತನವಾಗಿ ನಿರ್ಮಿಸಲಾಗಿರುವ ‘ಹಜರತ್ ಪೀರ್‌ಗಾಲಿಬ್ ಸಾಹೇಬ್ ಅಗಸಿ’ (ಪ್ರವೇಶದ್ವಾರ) ಗುರುವಾರ ಸಾಯಂಕಾಲ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು.
ಮಾಜಿ ಸಚಿವ ದಿವಂಗತ ಎಂ.ಸಿ. ಮನಗೂಳಿ ಅವರ ಕನಸಿನ ಯೋಜನೆಯಾದ ಈ ಅಗಸಿ ನಿರ್ಮಾಣಕ್ಕೆ ಸರ್ಕಾರದಿಂದ ₹65 ಲಕ್ಷ ಹಾಗೂ ವೈಯಕ್ತಿಕ ಹಾಗೂ ದಾನಿಗಳ ನೆರವಿನೊಂದಿಗೆ ಒಟ್ಟು ₹1 ಕೋಟಿಗೂ ಅಧಿಕ ವೆಚ್ಚ ಮಾಡಲಾಗಿದೆ. ಸುಮಾರು 8 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ, ಶಾಸಕ ಅಶೋಕ ಮನಗೂಳಿ ಅವರ ವಿಶೇಷ ಪ್ರಯತ್ನದಿಂದ ಪುರಾತನ ಶೈಲಿ ಹಾಗೂ ಆಧುನಿಕ ವಾಸ್ತುಶಿಲ್ಪದ ಸಮ್ಮಿಶ್ರಣದಲ್ಲಿ ನಿರ್ಮಿಸಲಾದ ಈ ಆಕರ್ಷಕ ಪ್ರವೇಶದ್ವಾರದ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಮುಕ್ತಾಯಗೊಂಡಿದೆ.
ಈ ಹಿಂದೆ ಜೀರ್ಣಾವಸ್ಥೆಯಲ್ಲಿದ್ದ ಅಗಸಿಯ ಜಾಗದಲ್ಲಿ ಪಟ್ಟಣಕ್ಕೆ ಸೂಕ್ತ ಪ್ರವೇಶದ್ವಾರ ನಿರ್ಮಿಸಬೇಕು ಎಂಬುದು ಎಂ.ಸಿ. ಮನಗೂಳಿ ಅವರ ಆಶಯವಾಗಿತ್ತು. ಲೋಕಾರ್ಪಣೆ ಸಂದರ್ಭದಲ್ಲಿ ನೂರಾರು ಮಹಿಳೆಯರು ಕುಂಭ ಹೊತ್ತು ಸಾಗಿದ ಭವ್ಯ ಮೆರವಣಿಗೆಯ ಮೂಲಕ ಪಟ್ಟಣದ ಗ್ರಾಮ ದೇವರೆಂದೇ ಪ್ರಸಿದ್ಧರಾದ ಪೀರ್‌ಗಾಲಿಬ್ ಸಾಹೇಬರ ಹೆಸರಿನ ಅಗಸಿಗೆ ಆಗಮಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ
ಶಾಸಕ ಅಶೋಕ ಮನಗೂಳಿ ಹಾಗೂ ಜನಪ್ರತಿನಿಧಿ, ಮಠಾಧೀಶರು, ಗಣ್ಯಾತೀತ ಗಣ್ಯರು, ಆಲಮೇಲ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮದ ನಾಗರಿಕರು, ಸೇರಿದಂತೆ ಅನೇಕರಿದ್ದರು.

