ಆರು ತಿಂಗಳಿಂದ ಚಡಚಣ ಪ್ರಯಾಣಿಕರ ಪರದಾಟ | ಪ.ಪಂ.-ಬಸ್ ನಿಲ್ದಾಣದ ಅಧಿಕಾರಿಗಳ ನಡುವೆ ಹೊಣೆಗಾರಿಕೆಯ ಜಟಾಪಟಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ಬಸ್ ನಿಲ್ದಾಣದ ಹೊರಭಾಗದಲ್ಲಿ ಕಳೆದ ಸುಮಾರು ಆರು ತಿಂಗಳಿಂದ ಕೊಳಚೆ ನೀರು ರಸ್ತೆಯ ಮೇಲೆ ನಿಂತು ಹರಿಯುತ್ತಿರುವುದರಿಂದ ಪ್ರಯಾಣಿಕರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.
ಬಸ್ ನಿಲ್ದಾಣಕ್ಕೆ ತೆರಳಬೇಕಾದ ಪ್ರಯಾಣಿಕರು ಕೊಳಚೆ ನೀರಿನಲ್ಲಿಯೇ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಲವು ದಿನಗಳಿಂದ ನಿಂತಿರುವ ಕೊಳಚೆ ನೀರಿನಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಬ್ಬೆಂದು ದುರ್ವಾಸನೆ ಹರಡುತ್ತಿದೆ. ಬಸ್‌ಗಾಗಿ ಗಂಟೆಗಟ್ಟಲೆ ಕಾಯುವ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಕುಳಿತುಕೊಳ್ಳುವ ಸ್ಥಿತಿ ಎದುರಾಗಿದೆ. ನಿಂತ ನೀರಿನಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಸಾರ್ವಜನಿಕರನ್ನು ಕಾಡುತ್ತಿದೆ.
ಸಾರ್ವಜನಿಕರ ಸಂಚಾರಕ್ಕೆ ಪ್ರಮುಖವಾಗಿರುವ ಬಸ್ ನಿಲ್ದಾಣದ ಸುತ್ತಲಿನ ಪ್ರದೇಶವೇ ಇಂತಹ ಅವ್ಯವಸ್ಥೆಗೆ ಒಳಗಾಗಿರುವುದು ಪಟ್ಟಣದ ಮೂಲಸೌಕರ್ಯ ನಿರ್ವಹಣೆಯ ಬಗ್ಗೆ ಪ್ರಶ್ನೆ ಮೂಡಿಸಿದೆ.
ಚಡಚಣ ಪಟ್ಟಣ ಪಂಚಾಯಿತಿಯ ವ್ಯಾಪ್ತಿಗೆ ಬಸ್ ನಿಲ್ದಾಣದ ಪ್ರದೇಶವೂ ಸೇರಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಬಸ್ ನಿಲ್ದಾಣದ ಹೊರಭಾಗದ ಚರಂಡಿ ಸಮಸ್ಯೆ ಯಾರ ವ್ಯಾಪ್ತಿಗೆ ಬರುತ್ತದೆ ಎಂಬ ವಿಚಾರದಲ್ಲಿ ಎರಡು ಇಲಾಖೆಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಇದರ ಪರಿಣಾಮವನ್ನು ಮಾತ್ರ ಕಳೆದ ಆರು ತಿಂಗಳಿಂದ ಪ್ರಯಾಣಿಕರು ಅನುಭವಿಸುವಂತಾಗಿದೆ.
ನಿತ್ಯ ನೂರಾರು ಪ್ರಯಾಣಿಕರು ಸಂಚರಿಸುವ ಬಸ್ ನಿಲ್ದಾಣದ ಪ್ರವೇಶದ್ವಾರದಲ್ಲೇ ಇಂತಹ ಅವ್ಯವಸ್ಥೆ ಮುಂದುವರಿದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಧಿಕಾರಿಗಳು ಪರಸ್ಪರ ಹೊಣೆಗಾರಿಕೆ ಆರೋಪಿಸುವುದನ್ನು ಬಿಟ್ಟು, ಸಮನ್ವಯದಿಂದ ಕೂಡಲೇ ಕಾಮಗಾರಿ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
“ಬಸ್‌ಗಳು ಒಳಹೊರಗೆ ಸಂಚರಿಸುವ ರಸ್ತೆಯಲ್ಲಿ ಕಾಮಗಾರಿ ಕೈಗೊಂಡು ರಸ್ತೆ ಬಂದ್ ಮಾಡಿದರೆ ನಮ್ಮ ಸಂಸ್ಥೆಗೆ ನಷ್ಟ ಉಂಟಾಗುತ್ತದೆ. ಅಲ್ಲದೆ, ವಾಹನ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯೂ ಇದೆ. ಇಂತಹ ಕ್ರಮ ಕೈಗೊಳ್ಳುವ ಅಧಿಕಾರ ಚಡಚಣ ಬಸ್ ನಿಲ್ದಾಣದ ಅಧಿಕಾರಿಗಳ ಕೈಯಲ್ಲಿಲ್ಲ. ಚರಂಡಿಯು ಬಸ್ ನಿಲ್ದಾಣದ ಆವರಣದ ಹೊರಗಡೆ ಇದ್ದು, ಅದು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಆ ಚರಂಡಿಗೂ ನಮ್ಮ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ”
– ಪವಾರ
ಚಡಚಣ ಬಸ್ ನಿಲ್ದಾಣಾಧಿಕಾರಿ
“ಚರಂಡಿ ಸಮಸ್ಯೆ ಬಗೆಹರಿಸಲು ಅಗತ್ಯ ಕಾಮಗಾರಿ ಕೈಗೊಳ್ಳಲು ಬಸ್ ನಿಲ್ದಾಣದ ಅಧಿಕಾರಿಗಳ ಅನುಮತಿ ಬೇಕಾಗಿದೆ. ಈ ಕುರಿತು ವಿಜಯಪುರದ ಬಸ್ ವ್ಯವಸ್ಥಾಪಕರಿಗೆ ಪತ್ರ ಬರೆಯಲಾಗುವುದು. ಅನುಮತಿ ದೊರೆತ ನಂತರ ಒಂದು ವಾರದೊಳಗೆ ಶಾಶ್ವತವಾಗಿ ಕೊಳಚೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗುವುದು”
– ಬಾಬಾಸಾಹೇಬ ತಾವಸೆ
ಪಟ್ಟಣ ಪಂಚಾಯಿತಿ ಸಿಇಒ

