ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕವು ಕೊಡಮಾಡುವ ಮಾಜಿ ಪ್ರಧಾನಿ ರಾಜೀವ್ ಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಯು, ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದ ಎಲೆಮರೆ ಕಾಯಿಯಂತಿರುವ ಯುವ ಬರಹಗಾರ, ಯುವ ಇತಿಹಾಸಕಾರರಾಗಿರುವ ಡಾ.ಎಂ.ಎಸ್ ಮುಜಾವರ್ ಅವರಿಗೆ ದೊರೆತಿದೆ.
ಡಾ. ಎಂಎಸ್ ಮುಜಾವರ್ ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟು ಬೆಳೆದು ಸಾರವಾಡ ಗ್ರಾಮದ ಮೊದಲ ಪಿ.ಹೆಚ್.ಡಿ ಪದವೀಧರರು. ಸ್ವಾತಂತ್ರ್ಯ ನಂತರ ಕರ್ನಾಟಕದಲ್ಲಿ ಮುಸ್ಲಿಂ ರಾಜಕೀಯ ಎಂಬ ವಿಷಯದ ಕುರಿತು ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದವರು. ಅಷ್ಟೇ ಅಲ್ಲದೆ, ವಿಜಯಪುರ ಸುತ್ತಮುತ್ತಲಿನ ಆದಿಲ್ ಶಾಹಿ ಸ್ಮಾರಕಗಳ ಕುರಿತು ಅಧ್ಯಯನ ಮಾಡಿ ಎಂಫಿಲ್ ಪದವಿ ಪಡೆಯುವ ಮೂಲಕ ಇತಿಹಾಸ ಕ್ಷೇತ್ರದಲ್ಲಿ ಪಾದಾರ್ಪಣೆಯನ್ನು ಮಾಡಿದವರು. ಇದರೊಂದಿಗೆ ಪದವಿ ಸ್ನಾತಕೋತ್ತರ ಪದವಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತಯಾರಿಯಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರಾಚೀನ, ಮಧ್ಯ, ಆಧುನಿಕ, ಕರ್ನಾಟಕ, ದಕ್ಷಿಣ ಭಾರತ, ಇತಿಹಾಸ ಲೇಖನ ಕಲೆ,ಯೂರೋಪಿನ ಇತಿಹಾಸ, ಆದಿಲ್ ಶಾಹಿ ಇತಿಹಾಸ ಹೀಗೆ ಹಲವಾರು ವಿಷಯಗಳ ಕುರಿತು 25ಕ್ಕೂ ಹೆಚ್ಚು ಕೃತಿಗಳನ್ನು ಮತ್ತು 30ಕ್ಕೂ ಹೆಚ್ಚು ಲೇಖನಗಳು ಹಾಗೂ 100ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿ ಲಕ್ಷಾಂತರ ವಿದ್ಯಾರ್ಥಿಗಳ ಮೆಚ್ಚುಗೆಯನ್ನು ಪಡೆದವರು.
ಇಷ್ಟೆಲ್ಲಾ ಸಾಧನೆಯನ್ನು ಮಾಡಿದ್ದರೂ ಇವರು ಯಾವತ್ತೂ ಪ್ರಶಸ್ತಿಯನ್ನು ಬಯಸಿ ಯಾರ ಬಳಿಯು ಹೋದವರಲ್ಲ. ಆದರೆ ಇಂತಹ ಎಲೆಮರೆ ಕಾಯಿ ಯಂತಿರುವ ಇವರ ಪ್ರತಿಭೆಯನ್ನು ಗುರುತಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಶಿಕ್ಷಕರ ಘಟಕವು ಮಾಜಿ ಪ್ರಧಾನಿ ರಾಜೀವಗಾಂಧಿ ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ನೀಡಿರುವುದು, ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸರ್ಪರಾಜ ಮಿರ್ದೇ ಹೇಳಿದರು.
ಆಶಿಫ್ ಭಗವಾನ, ನಜೀರ್ ಶೇಕ್ , ಭೀಮಾಶಂಕರ್, ಮಲ್ಲಿಕಾರ್ಜುನ್ ಸಿಂಗೆ ಇತರರು ಡಾ.ಎಂ ಎಸ್ ಮುಜಾವರ್ ಅವರಿಗೆ ಅಭಿನಂದನೆ ಸಲ್ಲಿಸಿದರು.

