ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಆದೇಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಈ ಬಾರಿಯ ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ, ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ರಾಸಾಯನಿಕ ಬಣ್ಣ ಲೇಪಿತ ಗಣೇಶ ವಿಗ್ರಹಗಳ ತಯಾರಿಕೆ, ಮಾರಾಟ ಮತ್ತು ಪ್ರತಿಷ್ಠಾಪನೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಮಹಾನಗರ ಪಾಲಿಕೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಪಿಒಪಿ ಹಾಗೂ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ನದಿ, ಕಾಲುವೆ, ಬಾವಿ ಮತ್ತು ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದರಿಂದ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗಗಳು ಹರಡುವ ಜತೆಗೆ ಪರಿಸರಕ್ಕೆ ತೀವ್ರ ಹಾನಿಯಾಗುತ್ತದೆ.
ಈ ಹಿನ್ನೆಲೆಯಲ್ಲಿ ಜಲ ಮಾಲಿನ್ಯ (ತಡೆ ಮತ್ತು ನಿಯಂತ್ರಣ) ಕಾಯ್ದೆ ೧೯೭೪ರನ್ವಯ ಈ ನಿಷೇಧ ಹೇರಲಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರಾದ ವೇಳೆ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ. ಪರಿಸರ ಸ್ನೇಹಿ ಗಣಪತಿ ತಯಾರಕರು ಮತ್ತು ವ್ಯಾಪಾರಸ್ಥರು ಕೇವಲ ಜೇಡಿಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ವಿಗ್ರಹಗಳನ್ನು ಮಾತ್ರ ತಯಾರಿಸಿ, ಮಾರಾಟ ಮಾಡುವಂತೆ ತಿಳಿಸಿದ್ದಾರೆ.
ಸಾರ್ವಜನಿಕರು ರಾಸಾಯನಿಕ ಬಣ್ಣದ ಮೂರ್ತಿಗಳನ್ನು ಖರೀದಿಸದೇ, ಪರಿಸರ ಸ್ನೇಹಿ ಜೇಡಿಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಬೇಕು ನಿಷೇಧಾಜ್ಞೆಯಲ್ಲಿ ತಿಳಿಸಿದ್ದಾರೆ.
ಕೃತಕ ಹೊಂಡಗಳಲ್ಲಿ ವಿಸರ್ಜಿಸಿ: ಪಾಲಿಕೆ ವತಿಯಿಂದ ನಗರದಲ್ಲಿ ನಿರ್ಮಿಸಲಾದ ಕೃತಕ ವಿಸರ್ಜನಾ ಹೊಂಡಗಳು ಅಥವಾ ಮೊಬೈಲ್ ಟ್ಯಾಂಕ್‌ಗಳಲ್ಲಿ ಮಾತ್ರ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದವರು ತಿಳಿಸಿದ್ದಾರೆ. ನಿಯಮ ಮೀರಿ ಪಿಒಪಿ ಮೂರ್ತಿ ತಯಾರಿಸಿದರೆ ಅಥವಾ ಮಾರಾಟ ಇಲ್ಲವೇ ಬಳಕೆ ಮಾಡಿದರೆ ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ-೧೯೭೬, ಜಲ ಕಾಯ್ದೆ ೧೯೭೪ ರ ಕಲಂ ೪೫(ಎ) ಹಾಗೂ ಪರಿಸರ (ಸಂರಕ್ಷಣಾ) ಅಧಿನಿಯಮ ೧೯೮೬ರ ಅಡಿಯಲ್ಲಿ ಭಾರೀ ದಂಡ ವಿಧಿಸುವುದರ ಜೊತೆಗೆ ಕಾನೂನು ಕ್ರಮ ಜರುಗಿಸಲಾಗುವುದು ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

