ಅರ್ಹ ಕುಟುಂಬಗಳಿಗೆ ಆದ್ಯತೆಯ ಮೇರೆಗೆ ಮಳಿಗೆ ಹಂಚಿಕೆ ಮಾಡುವಂತೆ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಮನವಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ದಲಿತ ಸಮುದಾಯದ ಚರ್ಮಕಾಯಕ ವೃತ್ತಿದಾರರಿಗೆ ಶಾಶ್ವತವಾಗಿ ವ್ಯಾಪಾರ ನಡೆಸಲು ಮಳಿಗೆಗಳನ್ನು ಒದಗಿಸುವಂತೆ ಒತ್ತಾಯಿಸಿ ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ (ರಿ.) ವಿಜಯಪುರ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ವಿಜಯಪುರ ನಗರ ಶಾಸಕರಿಗೆ ಮನವಿ ಸಲ್ಲಿಸಲಾಯಿತು.
ವಿಜಯಪುರ ನಗರದಲ್ಲಿ ಚರ್ಮಕಾಯಕ ವೃತ್ತಿಯನ್ನು ಅವಲಂಬಿಸಿಕೊಂಡು ಜೀವನ ನಡೆಸುತ್ತಿರುವ 9 ಅರ್ಹ ಕುಟುಂಬಗಳಿಗೆ ಶಾಶ್ವತ ಮಳಿಗೆ ಒದಗಿಸುವ ವಿಚಾರ ಹಲವು ವರ್ಷಗಳಿಂದ ಬಾಕಿ ಉಳಿದಿದೆ. ಸ್ವಂತ ಮಳಿಗೆಗಳಿಲ್ಲದೆ ಈ ಕುಟುಂಬಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಸರ್ಕಾರಿ ಪ್ರೌಢಶಾಲೆಯ ಕಾಂಪೌಂಡ್ ಸಮೀಪ ಮಳಿಗೆಗಳನ್ನು ನೀಡುವುದಾಗಿ ತಿಳಿಸಿ ಫಲಾನುಭವಿಗಳಿಂದ ಹಣ ಪಾವತಿಸಿಕೊಳ್ಳಲಾಗಿತ್ತು. ಆದರೆ ಹಲವು ವರ್ಷಗಳು ಕಳೆದರೂ ಶಾಶ್ವತ ಮಳಿಗೆಗಳು ದೊರೆಯದೆ ಸಮಸ್ಯೆ ಮುಂದುವರಿದಿದೆ ಎಂದು ಸಂಘಟನೆ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ಬಬಲೇಶ್ವರ ನಾಕಾದ ವಾಣಿಜ್ಯ ಮಳಿಗೆಗಳಲ್ಲಿ ಅವರಿಗೆ ಆದ್ಯತೆ ನೀಡಲು ಎಂದು ಭೀಮ್ ರಾಜ್ಯ ದಲಿತ್ ಸೇವಾ ಸಮಿತಿ ಆಗ್ರಹಿಸಿದೆ.
ಈ ವೇಳೆ ಸಮಿತಿ ರಾಜ್ಯಾಧ್ಯಕ್ಷ ಅಪ್ಪುರಾಜ್ ನಿಮಾದಾರ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕಬಾಡೆ, ರಾಜ್ಯ ಉಪಾಧ್ಯಕ್ಷ ವಿಜಯಕುಮಾರ ನಿಮಾದಾರ, ರಾಜ್ಯ ಮಹಿಳಾ ಅಧ್ಯಕ್ಷೆ ನೀಲಾಂಬಿಕಾ ಕಟ್ಟಿಮನಿ, ಜಿಲ್ಲಾಧ್ಯಕ್ಷ ನಾಗರಾಜ, ಪದಾಧಿಕಾರಿಗಳಾದ ಕಿರಣಕುಮಾರ ಅಲಿಯಾಬಾದ, ರಾಘವೇಂದ್ರ ಕಾಸೆ, ಸಲ್ಮಾ ಮೈರಾಗೋಳ, ನೀಲಮ್ಮ ಗಡ್ಡಿ, ಶೋಭಾ ರಾಠೋಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

