ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಬಲೇಶ್ವರ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಜನಪರ ಯೋಜನೆಗಳ ಅನುಷ್ಠಾನದಿಂದ ಪ್ರೇರಿತರಾಗಿ, ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ ಬಿಜೆಪಿಯ 50ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಮಂಗಳವಾರ ಮುಖಂಡ ಸುನೀಲ ಡೇಂಬ್ರಿ ಅವರ ನೇತೃತ್ವದಲ್ಲಿ ಈ ವೇಳೆ ಗುರಪ್ಪ ರಂಗಪ್ಪಗೋಳ, ಕೂಸಪ್ಪ ನರಲೆ, ವಿಠ್ಠಲ ತುಪನೂರ, ಸಾವಿತ್ರಿ ಡೇಂಬ್ರಿ, ಸುರೇಖಾ ಡೇಂಬ್ರಿ ಸೇರಿದಂತೆ 50ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಹೊನವಾಡದಲ್ಲಿ ಗಮನಾರ್ಹ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲಾಗಿದ್ದು, ಸುಮಾರು 15ರಿಂದ 20 ಸಾವಿರ ಎಕರೆ ಭೂಮಿ ನೀರಾವರಿಯಾಗಿದೆ. ಮುಂದಿನ ದಿನಗಳಲ್ಲೂ ಅಭಿವೃದ್ಧಿಯ ಕಾರ್ಯಗಳು ಮುಂದುವರೆಯಲಿದೆ. ಈ ಸೇರ್ಪಡೆಯೊಂದಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ಮತ್ತಷ್ಟು ಬಲಗೊಂಡಿದೆ.
ಪಕ್ಷ ಸಂಘಟನೆಯಲ್ಲಿ ಹೊಸಬರು–ಹಳಬರು ಎಂಬ ಯಾವುದೇ ಭೇದವಿಲ್ಲದೆ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮುನ್ನಡೆಯಲಾಗುವುದು ಎಂದು ತಿಳಿಸಿದರು.
ಮುಖಂಡ ಸುನೀಲ್ ಡೇಂಬ್ರಿ ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರ ಬೆನ್ನೆಲುಬಾಗಿ ಕೆಲಸ ಮಾಡುತ್ತೇವೆ. 20ಕ್ಕೂ ಹೆಚ್ಚು ವರ್ಷಗಳಿಂದ ಬಿಜೆಪಿಯಲ್ಲಿದ್ದು ಭ್ರಮನಿರಸನಗೊಂಡಿದ್ದೇವು.
ಸಚಿವ ಎಂಬಿ.ಪಾಟೀಲರ ಇಚ್ಛಾಶಕ್ತಿ, ಸತತ ಕಾಳಜಿಯಿಂದ ಬಬಲೇಶ್ವರ ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ವಿಶ್ವಾಸವಿಟ್ಟು ಹೊನವಾಡ ಮತ್ತು ಕ್ಷೇತ್ರದ ಪ್ರಗತಿಗಾಗಿ ಕಾಂಗ್ರೆಸ್ ಸೇರಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೊ. ರಾಜು ಆಲಗೂರ, ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.

