ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ತಾಸಬಾವಡಿ ಆವರಣದಲ್ಲಿ ಗಣೇಶ ವಿಸರ್ಜನೆಗೆ ಶಾಶ್ವತವಾಗಿ 3080 ಅಳತೆಯ ಹೊಂಡ ನಿರ್ಮಾಣ ಮಾಡಲು ಪಾಲಿಕೆಯ ಆಯಕ್ತರಿಗೆ ಖಡಕ್ ಸೂಚನೆ ನೀಡಿದ ನಂತರ ಅದಕ್ಕೆ ಒಪ್ಪಿದರು ಎಂದು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ. ಮಂಗಳವಾರ ಮಹಾನಗರ ಪಾಲಿಕೆ ಆಯುಕ್ತರಾದ ವಿಜಯಕುಮಾರ್ ಮೆಕ್ಕಳಕಿ ಅವರನ್ನು ಕರೆಯಿಸಿ, ನಗರದ ತಾಸಬಾವಡಿಯಲ್ಲಿ ಅನೇಕ ವರ್ಷಗಳಿಂದ ಕುಂಭ ಪೂಜೆ, ಮರಗಮ್ಮ ದೇವಿ ಜಾತ್ರೆಗೆ ಮಡಿ ನೀರು ತರುವುದು ಹಾಗೂ ಗಣೇಶ ವಿಸರ್ಜನೆ ಮಾಡುತ್ತ ಬರಲಾಗಿದೆ. ಇಂತಹ ಹಿಂದುಗಳ ಪವಿತ್ರ ಹಬ್ಬದ ಸಂದರ್ಭದಲ್ಲಿ ಸಂಬಂಧವಿಲ್ಲದವರ ಜೊತೆಗೂಡಿ, ಯಾಕೆ ಈ ಗೊಂದಲ ಸೃಷ್ಠಿ ಮಾಡುತ್ತಿದ್ದೀರಿ? ಹೊಂಡದ ಅಳತೆ ಕಡಿಮೆ ಮಾಡಿದರೆ, ಹೋರಾಟ ಮಾಡಬೇಕಾಗುತ್ತದೆ ಎಂದು ಆಯುಕ್ತರಿಗೆ ಎಚ್ಚರಿಸಿ, ಅಲ್ಲಿ ಶಾಶ್ವತವಾಗಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡುವ ಅಗತ್ಯವಿದೆ. ಆದ್ದರಿಂದ ಗಣೇಶ ಮಂಡಳಿಗಳ ಮತ್ತು ನಾಗರಿಕರ ಭಾವನೆಗೆ ಧಕ್ಕೆಯಾಗದಂತೆ, 3080 ಅಳತೆಯ ಹೊಂಡ ನಿರ್ಮಾಣ ಮಾಡಬೇಕೆಂದು ಖಡಕ್ ಸೂಚನೆ ನೀಡಿದಲ್ಲದೆ, ಅಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ವಿವರಿಸಿದ ನಂತರ, ತಾಸಬಾವಡಿ ವೀಕ್ಷಣೆ ಮಾಡುವ ಪ್ರವಾಸಿಗರಿಗಾಗಿ ಇದ್ದ ಪಾದಚಾರಿ ಮಾರ್ಗದ ಅಗಲವನ್ನು ಕಡಿಮೆ ಮಾಡಿ, ಹೊಂಡದ ಉದ್ದಗಲವನ್ನು ಹೆಚ್ಚಿಸುವಂತೆ ತಿಳಿಸಿದರು.
ಇದಕ್ಕೆ ಒಪ್ಪಿದ ಪಾಲಿಕೆ ಆಯುಕ್ತರು, ದೊಡ್ಡದು ಮಾಡುವುದಾಗಿ ತಿಳಿಸಿದ್ದಾರೆ. ಕಾರಣ ಗಣೇಶ ಭಕ್ತರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಯಾವುದೇ ಗೊಂದಲ ಸೃಷ್ಟಿ ಮಾಡುವವರ ಮಾತಿಗೆ ಕಿವಿಗೊಡಬೇಡಿ ಎಂದು ಶಾಸಕರು ಸಲಹೆ ನೀಡಿದ್ದಾರೆ.
ಅನೇಕ ದಶಕಗಳಿಂದ ನಡೆದುಕೊಂಡು ಬಂದ ಗಣೇಶ ವಿಸರ್ಜನೆಯನ್ನು ತಾಸಬಾವಡಿ ಬಳಿ ತಪ್ಪಿಸಬೇಕೆಂಬ ಯತ್ನ ನಡೆಸಲಾಗುತ್ತಿತ್ತು. ಅದರ ಭಾಗವಾಗಿಯೇ ಪ್ರಸಕ್ತ ವರ್ಷ ಕೇವಲ 3030 ಅಳತೆಯ ಸಣ್ಣ ಕೃತಕ ಹೊಂಡ ನಿರ್ಮಿಸಲು ನಿರ್ಧರಿಸಿ, ನನ್ನ ಹೆಸರು ಕೆಡಿಸಲು ಪ್ರಯತ್ನಿಸುತ್ತಿದ್ದರು. ಅಲ್ಲದೆ, ಅನೇಕ ದಿನಗಳಿಂದ ವಿನಾಕಾರಣ ಗೊಂದಲ ಸೃಷ್ಟಿಸಲಾಗಿತ್ತು. ಈ ವಿಷಯ ನನ್ನ ಗಮನಕ್ಕೂ ಬಂದಿದಲ್ಲದೆ, ಅನೇಕ ಗಜಾನನ ಮಂಡಳಿ ಪದಾಧಿಕಾರಿಗಳು, ಗಣೇಶಭಕ್ತರು, ನನ್ನನ್ನು ಸಂಪರ್ಕಿಸಿ ಯಾವುದೇ ಕಾರಣಕ್ಕೂ ತಾಸಬಾವಡಿ ಬಳಿ ಗಣೇಶ ವಿಸರ್ಜನೆ ಮಾಡುವುದನ್ನು ನಿಲ್ಲಿಸಬಾರದೆಂದು ಮನವಿ ಮಾಡಿಕೊಂಡಿದ್ದರು. ತಕ್ಷಣ ಪಾಲಿಕೆಯ ಆಯುಕ್ತರನ್ನು ಕರೆಯಿಸಿ, ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಲಾಯಿತು. ಹೀಗಾಗಿ 3030 ಅಳತೆಯ ಬದಲಾಗಿ, 30*80 ಅಳತೆಯ ಹೊಂಡ ನಿರ್ಮಾಣ ಮಾಡಿ, ಸಣ್ಣ ಮತ್ತು ದೊಡ್ಡ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲಕ್ಕೆ ಶಾಶ್ವತ ಹೊಂಡ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

