ಲೇಖನ
– ಸಂತೋಷ್ ರಾವ್ ಪೆರ್ಮುಡ.
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು
ದ.ಕ ಜಿಲ್ಲೆ-೫೭೪೧೯೮
ದೂ:೯೭೪೨೮೮೪೧೬೦
ಉದಯರಶ್ಮಿ ದಿನಪತ್ರಿಕೆ
ಒಂದು ಹಳ್ಳಿಯ ಹೊರಭಾಗದಲ್ಲಿ ಇದ್ದ ಬೃಹತ್ ಆಲದ ಮರದಲ್ಲಿ ಹೆಣ್ಣು ಗಿಳಿಯೊಂದು ಗೂಡನ್ನು ಕಟ್ಟಿಕೊಂಡು ತನ್ನ ಮರಿಗಳೊಂದಿಗೆ ವಾಸಿಸುತ್ತಿತ್ತು. ಗಿಳಿಗೆ ಪ್ರತಿದಿನವೂ ತನ್ನ ಗೂಡಿನಲ್ಲಿ ಏನೋ ಒಂದು ರೀತಿಯ ಕೆಟ್ಟ ವಾಸನೆಯು ಬರುತ್ತಿದೆ ಎಂದು ಅನಿಸುತ್ತಿತ್ತು. ತನ್ನ ಗೂಡಿನೊಳಗೆ ಈ ಕೆಟ್ಟ ವಾಸನೆ ಎಲ್ಲಿ ಬರುತ್ತಿದೆ ಎಂದು ಗಿಳಿಯು ಎಷ್ಟೇ ಹುಡುಕಿದರೂ ಅದಕ್ಕೆ ವಾಸನೆಯ ಮೂಲ ದೊರೆಯಲಿಲ್ಲ. ತಾನು ಇರುವಂತಹ ಗೂಡು ಎಷ್ಟೇ ಉತ್ತಮವಾಗಿ ಇದ್ದರೂ ಅದರೊಳಗಿಂದ ಬರುತ್ತಿರುವ ಕೆಟ್ಟ ವಾಸನೆಯಿಂದಾಗಿ ಆ ಗಿಳಿಗೆ ಗೂಡಿನಲ್ಲಿ ಇರಲು ಸಾಧ್ಯವಾಗಲಿಲ್ಲ.
ಕೊನೆಗೆ ಆ ಗಿಳಿಯು ತನ್ನ ಗುಂಪಿನ ಹಿರಿಯ ಪಾರಿವಾಳದ ಬಳಿಯಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಾ ನನ್ನನ್ನೊಂದು ವಿಭಿನ್ನವಾದ ಸಮಸ್ಯೆಯು ಕಾಡುತ್ತಿದೆ, ಅದು ಏನೆಂದರೆ ನನ್ನ ಗೂಡಿನಿಂದ ಒಂದು ರೀತಿಯ ಅಸಹ್ಯವಾದ ವಾಸನೆಯು ಬರುತ್ತಿದೆ. ಆ ವಾಸನೆಯಿಂದಾಗಿ ನಾನು ಹಲವಾರು ಬಾರಿ ನನ್ನ ಗೂಡನ್ನು ಬದಲಿಸುತ್ತಾ ಬಂದಿದ್ದೇನೆ. ಆದರೂ ಗೂಡಿನಿಂದ ಬರುತ್ತಿರುವ ವಾಸನೆಯು ಕಡಿಮೆಯಾಗಲಿಲ್ಲ ಮತ್ತು ನನ್ನ ಈ ಸಮಸ್ಯೆಯನ್ನು ಪರಿಹರಿಸಲೂ ನನ್ನಿಂದ ಸಾಧ್ಯವಾಗಿಲ್ಲ. ದಯವಿಟ್ಟು ನನ್ನ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಕೇಳಿಕೊಂಡಿತು.
ಗಿಳಿಯ ಸಮಸ್ಯೆಯನ್ನು ಅರಿತ ಹಿರಿಯ ಗಿಳಿಯು, ಅದರ ಗೂಡಿಗೆ ಹೋಗಿ ಪರೀಕ್ಷಿಸಿ, ಅಯ್ಯಾ ಗಿಳಿಯೇ ನೀನು ಇನ್ನು ಎಷ್ಟು ಬಾರಿ ನಿನ್ನ ಗೂಡನ್ನು ಬದಲಿಸಿದರೂ ನಿನ್ನ ಕೆಟ್ಟದಾಗಿ ಬರುತ್ತಿರುವ ಈ ವಾಸನೆಯ ಸಮಸ್ಯೆಯು ಬಗೆಹರಿಯದು. ಏಕೆಂದರೆ ನೀನು ಅನುಭವಿಸುತ್ತಿರುವ ವಾಸನೆಯ ಸಮಸ್ಯೆಯು ನಿನ್ನ ಗೂಡಿನಿಂದ ಬರುತ್ತಿರುವ ವಾಸನೆಯಲ್ಲ. ಬದಲಿಗೆ ಆ ವಾಸನೆ ಬರುತ್ತಿರುವುದು ನಿನ್ನ ದೇಹದಿಂದಲೇ ಎಂದಿತು.
ಇದನ್ನು ಅರಿತ ಗಿಳಿಗೆ ತನ್ನ ತಪ್ಪಿನ ಅರಿವಾಗಿ ಹಿರಿಯ ಗಿಳಿಯ ಎದುರು ನಾಚಿಕೆಯಿಂದ ತಲೆತಗ್ಗಿಸಿತು.
ಇನ್ನೊಬ್ಬರಲ್ಲಿರುವ ತಪ್ಪುಗಳನ್ನು ಮತ್ತು ಹುಳುಕುಗಳನ್ನು ಹುಡುಕುವ ಭರದಲ್ಲಿ ನಮ್ಮ ಹುಳುಕುಗಳ ಕಡೆಗೆ ಗಮನವಹಿಸುವುದಿಲ್ಲ. ಬೇರೆಯವರ ಒಳ್ಳೆಯತನವನ್ನು ಹುಡುಕುವ ಬದಲು ಅವರ ತಪ್ಪು ಹುಡುಕುವುದು ನಮಗೆ ಮುಖ್ಯವಾಗಿರುತ್ತದೆ. ಆದರೆ ನಮ್ಮ ದೃಷ್ಟಿಯೇ ಸರಿಯಿಲ್ಲದಾಗ, ಇನ್ನೊಬ್ಬರ ತಪ್ಪನ್ನು ಹುಡುಕಿ ಏನೂ ಪ್ರಯೋಜನವಿಲ್ಲ. ಇತರರ ತಪ್ಪನ್ನು ಹುಡುಕುವ ಬದಲು, ನಮ್ಮನ್ನು ನಾವು ಮೊದಲು ಸರಿಪಡಿಸಿಕೊಂಡು ಇತರರ ಒಳ್ಳೆಯ ಕೆಲಸವನ್ನು ಪ್ರಶಂಸಿಸಿ ನಮ್ಮನ್ನೊಮ್ಮೆ ನಾವೇ ವಿಶ್ಲೇಷಿಸಿಕೊಳ್ಳುವುದು ಉತ್ತಮ.


