ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯೋಗ ತರಬೇತುದಾರ, ಮ್ಯಾರಾಥಾನ್ ಓಟಗಾರ ಹಾಗೂ ಅಲ್ಟ್ರಾ ರನ್ನರ್ ರೇಣುಕಾ ಪ್ರಸಾದ ಅವರು ಸೆಪ್ಟೆಂಬರ್ ಮೊದಲ ವಾರದಿಂದ ಡಿಸೆಂಬರ್ ಮೊದಲ ವಾರದ ವರೆಗೆ ಪ್ರತಿ ಶನಿವಾರ ಮತ್ತು ರವಿವಾರ ನಗರದಲ್ಲಿ ಉಚಿತ ತರಬೇತಿ ನೀಡಲಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಹೊಸ ಕ್ಯಾಂಪಸ್ ನಲ್ಲಿರುವ ಎ.ಎಸ್.ಪಿ ಕಾಮರ್ಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಶನಿವಾರ ಮತ್ತು ರವಿವಾರ ಬೆಳಿಗ್ಗೆ 6 ಗಂಟೆಗೆ ತರಬೇತಿ ನೀಡಲಿದ್ದಾರೆ. ವೃಕ್ಷಥಾನ್ ಹೆರಿಟೇಜ್ ರನ್- 2026ರಲ್ಲಿ ನಡೆಯಲಿರುವ 10 ಕಿ. ಮೀ. ಮತ್ತು 21 ಕಿ. ಮೀ. ಓಟಗಳಲ್ಲಿ ಪಾಲ್ಗೋಳ್ಳುವವರು ಇದರ ಪ್ರಯೋಜನ ಪಡೆಯಬಹುದಾಗಿದೆ.
ರೇಣುಕಾ ಪ್ರಸಾದ ಅವರು ಭಾರತದಾದ್ಯಂತ ನಡೆದ ಹಲವು ಪ್ರತಿಷ್ಠಿತ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಬೆಂಗಳೂರು ಮ್ಯಾರಥಾನ್ ಮತ್ತು ಮುಂಬೈ ಮ್ಯಾರಥಾನ್ ಸೇರಿದಂತೆ ಹಲವಾರು ಪ್ರಮುಖ ಮ್ಯಾರಥಾನ್‌ಗಳಲ್ಲಿ ಅಧಿಕೃತ ಪೇಸರ್ ಆಗಿ ಪಾಲ್ಗೊಂಡಿದ್ದಾರೆ. ಅಲ್ಲದೇ, ಅವರ 18ಕ್ಕೂ ಹೆಚ್ಚು ವರ್ಷಗಳ ಓಟದ ಅನುಭವದೊಂದಿಗೆ ಓಟಗಾರರಿಗೆ ಸರಿಯಾದ ವೇಗ, ತರಬೇತಿ ಮತ್ತು ಓಟದ ತಂತ್ರಗಳನ್ನು ಬೆಳೆಸಲು ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೇ, ಕಳೆದ 20 ವರ್ಷಗಳಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.
ಓಟವೆಂದರೆ ನಿರಂತರತೆ, ಶಿಸ್ತು, ದೈಹಿಕ ಸಾಮರ್ಥ್ಯ ಮತ್ತು ಸಂತೋಷದಿಂದ ಸಾಗುವ ಒಂದು ಪಯಣವಾಗಿದೆ. ಓಡಲು ಸಾಧ್ಯವಾದಾಗ ಓಡಿ, ಸಾಧ್ಯವಾಗದಿದ್ದರೆ ನಡೆಯಿರಿ, ಅಗತ್ಯವಿದ್ದರೆ ತೆವಳಿಯಾದರೂ ಸರಿ, ಆದರೆ ಎಂದಿಗೂ ಕೈಬಿಡಬೇಡಿ. ಕ್ರಮಬದ್ಧ ಮತ್ತು ಹಂತ ಹಂತವಾಗಿ ಹೆಚ್ಚಿಸುವ ತರಬೇತಿ ಉತ್ತಮ ಓಟದ ಸಾಮರ್ಥ್ಯವನ್ನು ಬೆಳೆಸುವುದರ ಜೊತೆಗೆ, ಗಾಯಗಳ ಅಪಾಯವನ್ನು ಕಡಿಮೆ ಮಾಡಿ, ಓಟದ ಪಯಣವನ್ನು ಹೆಚ್ಚು ಸಂತೋಷದಾಯಕವಾಗಿಸುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

