ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಕಸಿತ ಭಾರತ್ ಯುವ ಸಂಪರ್ಕ ಹಾಗೂ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಖೇಲೋ ಇಂಡಿಯಾ ಸಂವಾದ – ಖೇಲ್ ಕಿ ಬಾತ್ ಪಿಎಂ ಮೋದಿ ಕೆ ಸಾಥ್ ಸಂವಾದ ಕಾರ್ಯಕ್ರಮದಲ್ಲಿ ವಿಜಯಪುರದ ಮೂಲದ
ಶಿಫಾ ಜಮಾದಾರ ಅನೇಕ ಮಹತ್ವದ ವಿಚಾರಗಳನ್ನು ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಹಂಚಿಕೊಂಡಿದ್ದಾರೆ.
ಭುವನೇಶ್ವರದ ಐಐಟಿಯಲ್ಲಿ ನಡೆದ ಸಂವಾದ ಬಿತ್ತರ ಕಾರ್ಯಕ್ರಮದಲ್ಲಿ ಸಂವಾದಕ್ಕೆ ಆಯ್ಕೆಯಾಗಿ ತಮ್ಮ ವಿಷಯವನ್ನು ಮಂಡಿಸಿದರು.
ಗ್ರಾಮೀಣ ಭಾಗ ಕ್ರೀಡಾ ಪ್ರತಿಭೆಗಳ ಆಗರವಾಗಿದೆ, ಹೀಗಾಗಿ ಬಾಲ್ಯದಲ್ಲಿಯೇ ಈ ಗ್ರಾಮೀಣ ಪ್ರತಿಭೆಗಳಿಗೆ ಪೂರಕವಾದ ಪ್ರೋತ್ಸಾಹ, ಅವಕಾಶ, ತರಬೇತಿ ನೀಡಿದರೆ ಈ ಪ್ರತಿಭೆಗಳು ಕ್ರೀಡೆಯಲ್ಲಿ ಬೆಳಗಲು ಸಾಧ್ಯ, ಆ ಮೂಲಕ ೨೦೩೦ ರಲ್ಲಿ ನಮ್ಮ ಹೆಮ್ಮೆಯ ಭಾರತ ವಿಕಸಿತ ಕ್ರೀಡಾ ರಾಷ್ಟ್ರವಾಗಿ ಮಿಂಚಲಿದೆ ಎಂದು ಹೇಳಿದರು.
ಶಾಲಾ ಮಟ್ಟದಲ್ಲಿಯೇ ಹೆಚ್ಚಿನ ಕ್ರೀಡಾಕೂಟ ಆಯೋಜನೆಗೆ ಒತ್ತು ನೀಡುವ ಜೊತೆಗೆ ಅನುದಾನದ ಬಲ ಸಹ ನೀಡಬೇಕು ಎಂಬ ಅನೇಕ ವಿಷಯಗಳನ್ನು ಹಂಚಿಕೊಂಡರು.
ಈ ಹಿಂದೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ವಿಶ್ವ ಶೃಂಗ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಶಿಫಾ ಭಾಗವಹಿಸಿದ್ದರು.
ನಂತರ ಶಿಫಾ ಜಮಾದಾರ ಅವರನ್ನು ಒಲಂಪಿಕ್ಸ್ ಆಟಗಾರ್ತಿ ಧ್ಯುತಿ ಚಾಂದ್, ಕೇಂದ್ರ ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಅಜೀತ್ ಕುಶವಾಹ್ ಮೊದಲಾದವರು ಪ್ರಮಾಣ ಪತ್ರ ನೀಡಿ ಸನ್ಮಾನಿಸಿದರು.

