ಕಲಬುರಗಿಯನ್ನು ಅತೀ ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಲು ಆಗ್ರಹಿಸಿ ಅಫ್ಜಲ್‌ಪುರದಲ್ಲಿ ರಸ್ತೆ ತಡೆ | ಸಿಎಂಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಅಫ್ಜಲ್‌ಪುರ: ತಾಲೂಕು ಕೇಂದ್ರದಲ್ಲಿ ಸ್ವಾಭಿಮಾನಿ ಕಬ್ಬು ಬೆಳೆಗಾರರ ಐಕ್ಯ ಹೋರಾಟ ಸಮಿತಿ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ತೀವ್ರ ಪ್ರತಿಭಟನೆ ನಡೆಸಲಾಯಿತು. ಕಲಬುರಗಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯನ್ನು ಸಂಪೂರ್ಣವಾಗಿ ‘ಅತೀ ಬರಗಾಲ ಪೀಡಿತ ಪ್ರದೇಶ’ವೆಂದು ಸರ್ಕಾರ ಅಧಿಕೃತವಾಗಿ ಘೋಷಿಸಬೇಕೆಂದು ರೈತರು ಆಗ್ರಹಿಸಿದರು. ಪ್ರತಿಭಟನಾಕಾರರು ಮುಖ್ಯ ರಸ್ತೆಯಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ, ರಸ್ತೆ ತಡೆದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಳೆ ಇಲ್ಲದೆ ಕಬ್ಬು ಸೇರಿದಂತೆ ಪ್ರಮುಖ ಬೆಳೆಗಳು ಒಣಗಿ ಹೋಗಿದ್ದು, ಅನ್ನದಾತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಮುಖಂಡರು ಅಳಲು ತೋಡಿಕೊಂಡರು.
ಕೂಡಲೇ ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕೆಂದು ಪಟ್ಟು ಹಿಡಿದರು.
ಬಳಿಕ ಸ್ಥಳೀಯ ತಹಸೀಲ್ದಾರ್ ಅವರ ಮೂಲಕ ಮುಖ್ಯಮಂತ್ರಿಗಳಿಗೆ ತಮ್ಮ ಬೇಡಿಕೆಗಳ ಲಿಖಿತ ಮನವಿ ಪತ್ರವನ್ನು ಸಲ್ಲಿಸಲಾಯಿತು.
“ಮಳೆಯಿಲ್ಲದೆ ಇಂದು ರೈತನ ಹೊಲದಲ್ಲಿ ಬೆಳೆದ ಬೆಳೆಗಳೆಲ್ಲ ಕಣ್ಣೆದುರೇ ಒಣಗಿ ಬೂದಿಯಾಗುತ್ತಿವೆ. ಸಾಲ-ಸೂಲ ಮಾಡಿ ಬಿತ್ತನೆ ಮಾಡಿದ ಅನ್ನದಾತ ಕಂಗಾಲಾಗಿದ್ದು, ಗುಳೆ ಹೋಗುವ ಪರಿಸ್ಥಿತಿ ಬಂದೊದಗಿದೆ. ಸರ್ಕಾರ ಕೇವಲ ಕಾಗದದ ಮೇಲೆ ಸಮೀಕ್ಷೆ ನಡೆಸುವುದನ್ನು ಬಿಟ್ಟು ವಾಸ್ತವ ಸ್ಥಿತಿ ಅರಿತು ಕಲಬುರಗಿಯನ್ನು ತಕ್ಷಣವೇ ಅತೀ ಬರಗಾಲ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಪ್ರತಿ ಎಕರೆಗೆ ವೈಜ್ಞಾನಿಕ ಪರಿಹಾರ ಒದಗಿಸುವುದರ ಜೊತೆಗೆ ರೈತರ ಕೃಷಿ ಸಾಲವನ್ನು ಸಂಪೂರ್ಣ ಮನ್ನಾ ಮಾಡದಿದ್ದರೆ, ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು.”
– ಶ್ರೀಮಂತ ಬಿರಾದಾರ
ರೈತ ಮುಖಂಡರು

