ಜಮಖಂಡಿಯ ಬಿ.ಎಲ್.ಡಿ.ಇ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟೀಯ ಕ್ರೀಡಾ ದಿನಾಚರಣೆ
ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ: ಭಾರತದ ಹಾಕಿ ಮಾಂತ್ರಿಕ, ‘ಹಾಕಿ ದಂತಕಥೆ’ ಮೇಜರ್ ಧ್ಯಾನಚಂದ್ ಅವರ ಜನ್ಮದಿನದ ಅಂಗವಾಗಿ ರಾಷ್ಟೀಯ ಕ್ರೀಡಾ ದಿನಾಚರಣೆಯನ್ನು ಬಿ.ಎಲ್.ಡಿ.ಇ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ), ಜಮಖಂಡಿಯಲ್ಲಿ ಶನಿವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಮೇಜರ್ ಧ್ಯಾನಚಂದ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಪ್ರಶಿಕ್ಷಣಾರ್ಥಿಗಳಿಗಾಗಿ ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಸ್. ಕಾಗವಾಡೆ, “ಕ್ರೀಡೆ ವಿದ್ಯಾರ್ಥಿಗಳಲ್ಲಿ ದೈಹಿಕ ಸಾಮರ್ಥ್ಯದ ಜೊತೆಗೆ ಶಿಸ್ತು, ಸಮಯಪಾಲನೆ, ತಂಡದ ಮನೋಭಾವ, ನಾಯಕತ್ವ ಗುಣ ಹಾಗೂ ಸೋಲು-ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸುವ ಮನೋಭಾವವನ್ನು ಬೆಳೆಸುತ್ತದೆ. ಭವಿಷ್ಯದ ಶಿಕ್ಷಕರಾಗಲಿರುವ ಪ್ರಶಿಕ್ಷಣಾರ್ಥಿಗಳು ಕ್ರೀಡೆಯ ಮಹತ್ವವನ್ನು ಅರಿತು, ತಮ್ಮ ವಿದ್ಯಾರ್ಥಿಗಳಲ್ಲಿಯೂ ಕ್ರೀಡಾಸಕ್ತಿಯನ್ನು ಬೆಳೆಸಬೇಕು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ. ಕೆ.ಜೆ. ಜೀರಗಾಳಿ, ಪ್ರೊ. ಎಲ್.ಎಂ. ಮಾರ್ಕಪನಳ್ಳಿ, ಪ್ರೊ. ಅಶ್ವಿನಿ ಅನಂತಪೂರ, ಪ್ರೊ. ಪ್ರೇಮಾನಂದ ಹಿರೇಮಠ, ದೈಹಿಕ ನಿರ್ದೇಶಕ ಪ್ರೊ. ಮಹಾದೇವ ಗಲಬಿ, ಗ್ರಂಥಪಾಲಕರಾದ ಲಕ್ಷ್ಮೀ ಧರ್ಮಟ್ಟಿ, ವಾಯ್.ಎಸ್. ಕೋರಿ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಸರ್ವ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

