ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗಾಂಧಿ ವೃತ್ತ ನವೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿರುವ ತಮ್ಮ ಗೃಹಕಚೇರಿಯಲ್ಲಿ ಸಭೆ ನಡೆಸಿದ ಸಚಿವರು ಕಾಮಗಾರಿಯ ವಿನ್ಯಾಸ, ರೂಪುರೇಷೆ ಮತ್ತು ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಗರದ ಹೃದಯ ಭಾಗದಲ್ಲಿರುವ ಐತಿಹಾಸಿಕ ಗಾಂಧಿ ವೃತ್ತವು ಹಲವು ವರ್ಷಗಳಿಂದ ಹಳೆಯ ರೂಪದಲ್ಲಿಯೇ ಇದೆ. ಇಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯೂ ಚಿಕ್ಕದಾಗಿದ್ದು, ಬೆಳೆಯುತ್ತಿರುವ ವಿಜಯಪುರದ ಸೌಂದರ್ಯಕ್ಕೆ ತಕ್ಕಂತೆ ಈ ವೃತ್ತವನ್ನು ನವೀಕರಿಸುವ ಅಗತ್ಯವಿದೆ. ಸತ್ಯ, ಅಹಿಂಸೆ, ಶಾಂತಿ ಹಾಗೂ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಬಾಪೂಜಿ ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಅವರ ಸ್ಮರಣೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಮತ್ತು ನಗರದ ಸೌಂದರ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಡೀ ಗಾಂಧಿ ವೃತ್ತವನ್ನು ನವೀಕರಿಸಿ, ಭವ್ಯವಾದ ಗಾಂಧೀಜಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗಾಂಧೀಜಿ ವೃತ್ತವನ್ನು ಅಂದ ಚಂದಗೊಳಿಸಿ, ಭವ್ಯವಾದ ಗಾಂಧಿಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಲು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಆಯುಕ್ತರಿಗೆ ಸಚಿವರು ಸೂಚನೆ ನೀಡಿದ್ದರು. ಅದರಂತೆ, ಪ್ರಖ್ಯಾತ ವಾಸ್ತುಶಿಲ್ಪಿ ಆನಂದ ಕುಸೂರ ಅವರು ಸಿದ್ಧಪಡಿಸಿರುವ ವಿನ್ಯಾಸವನ್ನು ಸಚಿವರಿಗೆ ತೋರಿಸಿದರು. ಅದನ್ನು ಪರಿಶೀಲಿಸಿದ ಸಚಿವರು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು. ಅಲ್ಲದೇ, ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಂಡು, ಮುಂಬರುವ ಗಾಂಧಿ ಜಯಂತಿಯಂದೇ ವೃತ್ತದ ನವೀಕರಣಕ್ಕೆ ಶಂಕುಸ್ಥಾಪನೆ ನೆರವೇರಿಸಲು ಕ್ರಮ ಕೈಗೊಲ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಭೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗದ ಅಧ್ಯಕ್ಷ ಬಾಪೂಗೌಡ ಪಾಟೀಲ ಶೇಗುಣಸಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಆಯುಕ್ತ ರಾಜಶೇಖರ ಡಂಬಳ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

