ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ.
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ನನ್ನೊಲವಿನ ರಾಣಿ,
ನನ್ನ ಅತಿಯಾದ ತುಂಟತನಕ್ಕೆ ನಿನ್ನ ಸೌಂದರ್ಯದ ಲಾವಣ್ಯ ಮತ್ತು ಮೃದು ಸ್ವಭಾವ ಒಂದು ಹೊಸ ಅರ್ಥವನ್ನು ತಂದುಕೊಟ್ಟಿತು. ನಿನ್ನ ಆ ಸುಂದರವಾದ, ಕಾಡಿಗೆ ಹಚ್ಚದಿದ್ದರೂ ಹೊಳೆಯುವ ದೊಡ್ಡ ಜಿಂಕೆಯ ಕಣ್ಣುಗಳು, ಚಂದ್ರನ ಬಿಂಬದಂತಿರುವ ವಿಶಾಲವಾದ ಹಣೆ, ನಿನ್ನ ಕೆನ್ನೆಯ ಮೇಲೆ ಬೀಳುವ ಆ ಮುದ್ದಾದ ಸುಳಿ ಮುಗುಳ್ನಗೆ ಮತ್ತು ನವಿಲಿನ ಗರಿಯಂತೆ ತೂಗಾಡುವ ನಿನ್ನ ಕಪ್ಪನೆಯ ಉದ್ದನೆಯ ರೇಷ್ಮೆಯಂತಹ ಕೂದಲು.. ಇವುಗಳನ್ನು ನೋಡುವಾಗಲೆಲ್ಲಾ ನನ್ನ ಎದೆಯ ಬಡಿತ ನಿಲ್ಲದಂತೆ ಹೆಚ್ಚಾಗುತ್ತದೆ. ನೀನು ಕೇವಲ ಸುಂದರಿಯಲ್ಲ, ನೀನು ನನ್ನ ಪ್ರತಿಯೊಂದು ಉಸಿರನ್ನು ಆಳುವ ದೇವತೆ. ನಿನ್ನ ಸಂಪಿಗೆ ಯಂತಹ ತೀಕ್ಷ್ಣ ಮೂಗು ಮತ್ತು ಕೆಂಪನೆಯ ಗಲ್ಲಗಳು ನನ್ನ ಹೃದಯವನ್ನು ಸಂಪೂರ್ಣವಾಗಿ ಕರಗಿಸಿಬಿಡುತ್ತವೆ. ಬಾಲ್ಯದಲ್ಲಿ ಕೆಸರಲ್ಲಿ ಆಡುತ್ತಾ, ಕಳ್ಳ-ಪೋಲೀಸ್ ಆಟವಾಡುತ್ತಾ, ಹಳ್ಳದ ದಡದಲ್ಲಿ ಚಿನ್ನಿ ದಾಂಡು ಆಡುತ್ತಾ, ಮರ ಹತ್ತಿ ಹಣ್ಣು ಕದಿಯುತ್ತಾ ಜೊತೆಯಾಗಿ ಬೆಳೆದ ನಾವು, ಹದಿಹರೆಯದ ಹರಿವಿನ ಹೊಸ್ತಿಲಿಗೆ ಬಂದಾಗ ನಮ್ಮ ನಡುವಿನ ಆ ನಿಷ್ಕಲ್ಮಷ ಗೆಳೆತನ ಯಾವಾಗ ಗಾಢವಾದ ಪ್ರೇಮವಾಗಿ ಬದಲಾಯಿತು ಎಂದು ನಮಗೆ ತಿಳಿಯಲೇ ಇಲ್ಲ.

ನನ್ನ ಪ್ರೀತಿಯ ಜೀವವೇ, ನನ್ನ ಬಾಲ್ಯದ ಗೆಳತಿಯೇ, ನಿನ್ನನ್ನು ನೆನಪಿಸಿಕೊಂಡರೆ ಸಾಕು, ನನಗೆ ಆ ಬಯಲುಸೀಮೆಯ ಆ ವಿಶಾಲವಾದ ಮುಕ್ತ ಆಕಾಶ, ಕಣ್ಣು ಹಾಯಿಸಿದಷ್ಟೇ ಕಾಣುವ ಒಣ ಭೂಮಿ, ಸುತ್ತಲೂ ಹರಡಿರುವ ಕಳ್ಳಿ ಬೇಲಿಗಳು, ಒಣಗಿದ ಹುಲ್ಲಿನ ಮೈದಾನಗಳು ಮತ್ತು ಸಂಜೆಯ ತಂಗಾಳಿ ನನಗೆ ಅದ್ಭುತ ಕವಿತೆಯಂತೆ ಭಾಸವಾಗುತ್ತದೆ. ನೀನು ಆ ಕಠಿಣ ಬಯಲುಸೀಮೆಯ ಬಂಜರು ನೆಲದಲ್ಲಿ ಹಠಾತ್ತನೆ ಅರಳಿದ ಕಮಲದಂತಿರುವೆ. ಪ್ರಕೃತಿಯ ಒಂದು ಸುಂದರ ವಿಸ್ಮಯ. ನಮ್ಮೆದುರಿನ ಆ ತೀಕ್ಷ್ಣ ಬಿಸಿಲು, ಕಾಲಿಗೆ ಹತ್ತುವ ಕೆಮ್ಮಣ್ಣಿನ ರಸ್ತೆಗಳು, ಮುಳ್ಳಿನ ಗಿಡಗಳು ಮತ್ತು ದೂರದಲ್ಲಿ ಧೂಳಿನ ನಡುವೆ ಮರÉಯಾಗುವ ಬೆಟ್ಟಗಳ ಸಾಲು. ನಾವಿಬ್ಬರು ಜೊತೆಯಾಗಿ ಕಳೆದ ಬಾಲ್ಯದ ದಿನಗಳಿಗೆ ಮೂಕ ಸಾಕ್ಷಿಯಾಗಿ ನಿಂತಿವೆ.
ಪ್ರಕೃತಿ ದೇವಿಯ ಮಡಿಲಲ್ಲಿ ಅರಳಿದ ಅಪರೂಪದ ಅಪ್ರತಿಮ ಪ್ರೇಮ ಕಥೆ ನಮ್ಮದು ಅಂತ ಹೇಳಿದರೆ ರೂಪವತಿಯಾದ ರೂಪಾ ಎಂದು ಹೆಸರಿರುವ ನಿನಗೂ ಒಂದು ಮೆರಗು. ಆ ಸವಿ ನೆನಪುಗಳನ್ನು, ಅಂದಿನ ಸಿಹಿ ಕ್ಷಣಗಳನ್ನು ಮತ್ತು ನಮ್ಮಿಬ್ಬರ ಬಾಲ್ಯದ ಮಧುರ ದಿನಗಳನ್ನು ನೆನಪಿಸಿಕೊಳ್ಳದ ದಿನಗಳಿಲ್ಲ ಗೆಳತಿ. ನನ್ನ ಹೃದಯದ ಆಳದಿಂದ ಬರೆಯುತ್ತಿರುವ ಈ ಸುದೀರ್ಘ ಪ್ರೇಮ ಕಾವ್ಯ ನಿನಗಾಗಿ…

ಬಿರುಗಾಳಿ ಬೀಸುವ ಆ ಬಯಲು ನೆಲದಲ್ಲಿ, ಮೃದುವಾಗಿ ಬೀಸುವ ಹಿತವಾದ ತಂಗಾಳಿಯಂತೆ ನಿನ್ನ ನಡಿಗೆಯಿದೆ. ಸೂರ್ಯನ ತೀಕ್ಷ್ಣ ಕಿರಣಗಳು ಹೊಲದ ಬಂಗಾರದಂಥ ಜೋಳದ ಬೆಳೆಗಳ ಮೇಲೆ ಬಿದ್ದಾಗ ಹೇಗೆ ಹೊಳೆಯುತ್ತವೆಯೋ, ಹಾಗೆಯೇ ನಿನ್ನ ಮುಖದ ಮೇಲಿನ ನಿಷ್ಕಲ್ಮಷ ನಗುವಿನಲ್ಲಿ ನನ್ನ ಇಡೀ ಬದುಕು ಬೆಳಗುತ್ತಿದೆ. ನಿನ್ನ ಹೆಜ್ಜೆಯ ಸದ್ದು ಕೇಳಿದರೆ ಸಾಕು, ಈ ಒಣ ಭೂಮಿಯಲ್ಲೂ ಮಲ್ಲಿಗೆಯ ಸುಗಂಧ ಹರಡಿದಂತೆ ಭಾಸವಾಗುತ್ತದೆ. ನಮ್ಮ ಹಳ್ಳಿಯ ಬಾವಿಯ ದಡ, ಆ ಹರಡಿದ ಆಲದ ಮರಗಳು ನಮ್ಮ ಪ್ರೀತಿಯ ಮೌನ ಸಾಕ್ಷಿಗಳು.
ನಮ್ಮ ಬಾಲ್ಯದ ಆಟದ ದಿನಗಳಿಂದ ಹಿಡಿದು ಇಂದಿನವರೆಗೂ, ನಾವು ಹಂಚಿಕೊಂಡಿರುವ ಪ್ರತಿಯೊಂದು ಕ್ಷಣವೂ ನನ್ನ ಪಾಲಿಗೆ ದೇವಲೋಕದ ಅಮೃತವೇ ಸರಿ. ಅಂದು ಸದಾ ತುಂಟತನದಿಂದ, ನಿನ್ನ ಜುಟ್ಟು ಎಳೆದು ಓಡಿಹೋಗುತ್ತಿದ್ದ, ನಿನ್ನ ಕಣ್ಣೀರಿಗೆ ಕಾರಣವಾಗುತ್ತಿದ್ದ ಆ ಕಡುಗಪ್ಪನೆಯ ಕಣ್ಣುಗಳ, ಎತ್ತರದ, ಗಂಭೀರ ನಡಿಗೆಯ ಚೂರು ಹಠಮಾರಿ ಹುಡುಗ ನಾನಾಗಿದ್ದೆ. ಊರಿನವರೆಲ್ಲ ನನ್ನ ತುಂಟತನಕ್ಕೆ ಬೈಯುತ್ತಿದ್ದಾಗ, ನನ್ನ ಪರವಾಗಿ ನಿಂತು ವಾದಿಸುತ್ತಿದ್ದವಳು ನೀನೇ. ನಾನು ಎಷ್ಟೇ ಕೋಪದಲ್ಲಿದ್ದರೂ ನಿನ್ನ ಒಂದು ಮುಗುಳ್ನಗೆ ನನ್ನನ್ನು ಶಾಂತಗೊಳಿಸುತ್ತಿತ್ತು. ಹಠಮಾರಿ ಮತ್ತು ಯಾರಿಗೂ ಬಗ್ಗದ ಸ್ವಭಾವ ನನ್ನದಾಗಿದ್ದರೂ, ನಿನ್ನ ಕಣ್ಣ ನೋಟಕ್ಕೆ ನಾನು ಯಾವಾಗಲೂ ಸೋಲುತ್ತಿದ್ದೆ.
ಆ ದಿನವಂತೂ ನನ್ನ ಜೀವನದ ಅತ್ಯಂತ ಸುಂದರವಾದ, ಎಂದಿಗೂ ಮರೆಯಲಾಗದ ಸುವರ್ಣಾಕ್ಷರಗಳ ದಿನ. ನಮ್ಮೂರಿನ ಆ ಹಳೆಯ ಪಾರ್ಕಿನ ಒಂಟಿ ಆಲದ ಮರದ ಕೆಳಗೆ, ಸಂಜೆಯ ಕೆಂಬೆಳಕು ಮೂಡುತ್ತಿದ್ದ ಆ ಮಬ್ಬು ಹೊತ್ತಿನಲ್ಲಿ ನಾವಿಬ್ಬರು ಭೇಟಿಯಾದಾಗ, ಜಗತ್ತಿನ ಎಲ್ಲ ಶಬ್ದಗಳೂ ಅಡಗಿ, ಕಾಲವೇ ಒಂದು ಕ್ಷಣ ಸ್ತಬ್ಧವಾಗಿತ್ತು. ಹಳೆಯ ಗೆಳೆತನದ ಎಲ್ಲ ಮಿತಿಗಳನ್ನು ಮೀರಿ, ಮೊದಲ ಬಾರಿಗೆ ಐ ಲವ್ ಯೂ ಎಂದು ಒಬ್ಬರ ಕಿವಿಯಲ್ಲಿ ಇನ್ನೊಬ್ಬರ ಪಿಸುಗುಟ್ಟುತ್ತ ಪರಸ್ಪರರನ್ನು ಗಟ್ಟಿಯಾಗಿ ಆಲಿಂಗಿಸಿದೆವು. ನಿನ್ನ ಉಸಿರಿನ ಬಿಸಿ ನನ್ನ ಮುಖಕ್ಕೆ ತಗುಲಿದಾಗ ಜಗವೇ ಮರೆಯಾಯಿತು. ನಮ್ಮಿಬ್ಬರ ಅಧರಗಳು ಹತ್ತಿರ ಬಂದು, ಅದರತೊಡಗಿದವು. ಮೊದಲ ಬಾರಿಗೆ ಪರಸ್ಪರರ ಅಧರಗಳು ಒಂದರ ಮೇಲೊಂದು ಮುದ್ರೆಯನ್ನೊತ್ತಿದವು. ರಾಣಿಜೇನಿನ ಸಿಹಿಗೆ ಅಧರ ಹಾಕಿದ ಆ ಸುಂದರ ಕ್ಷಣ, ನನ್ನ ಇಡೀ ಜೀವನದ ಅತ್ಯಂತ ಸಿಹಿಯಾದ ಮೈಲಿಗಲ್ಲು.
ಅಂದು ನನ್ನ ತುಟಿಗಳ ಮೇಲೆ ಅರಳಿದ ಆ ಮೊದಲ ಎಳೆಯ ಮುತ್ತು, ನಮ್ಮ ಬಾಲ್ಯದ ಗೆಳೆತನಕ್ಕೆ ಪ್ರೀತಿಯ ಪಟ್ಟಾಭಿಷೇಕ ಮಾಡಿತ್ತು. ಮತ್ತು ನಮ್ಮ ಪ್ರೀತಿಯ ಆಳವನ್ನು ಜಗತ್ತಿಗೆ ಸಾರಿತ್ತು. ಆ ಪುಟ್ಟ ಮುತ್ತಿನ ಸಿಹಿ ಇಂದಿಗೂ ನನ್ನ ತುಟಿಗಳ ಮೇಲೆ ಹಾಗೇ ಹಸಿರಾಗಿದೆ. ಅದು ಕೇವಲ ಎರಡು ದೇಹಗಳ ಮಿಲನವಾಗಿರಲಿಲ್ಲ, ಎರಡು ಆತ್ಮಗಳ ಶಾಶ್ವತ ಬಂಧನವಾಗಿತ್ತು. ಅಂದು ನಿನ್ನ ಮುಖದಲ್ಲಿ ಮೂಡಿದ ನಾಚಿಕೆಯ ಕೆಂಪು ಬಣ್ಣ ಇಂದಿಗೂ ನನ್ನ ಕಣ್ಣ ಮುಂದೆ ಹಾಗೇ ಇದೆ.ಆ ಮಧುರ ದಿನದಿಂದ ಇಂದಿನವರೆಗೆ ಪ್ರತಿಯೊಂದು ಕ್ಷಣವೂ, ಪ್ರತಿಯೊಂದು ಉಸಿರಲ್ಲೂ ನಾನು ನಿನ್ನನ್ನೇ ಆರಾಧಿಸುತ್ತಿದ್ದೇನೆ. ನಿನ್ನ ಪ್ರೀತಿಯೇ ನನ್ನನ್ನು ಒಬ್ಬ ಜವಾಬ್ದಾರಿಯುತ, ಸುಂದರ ಮನಸ್ಸಿನ ಗಂಡಸನ್ನಾಗಿ ರೂಪಿಸಿದೆ.
ನಿನ್ನ ಕಣ್ಣಲ್ಲಿ ನನಗಾಗಿ ಇರುವ ಪ್ರೀತಿಯನ್ನು ಕಂಡಾಗ ನಾನೇ ಈ ಪ್ರಪಂಚದ ಅತ್ಯಂತ ಅದೃಷ್ಟವಂತ ಪುರುಷ ಎಂದು ಹೆಮ್ಮೆಯಾಗುತ್ತದೆ. ಬಾಲ್ಯದ ನಿಷ್ಕಲ್ಮಷ ಸ್ನೇಹಿತರಾಗಿದ್ದ ನಾವಿಬ್ಬರು, ಇಂದು ಇಡೀ ಜೀವನವನ್ನು ಪತಿಯಾಗಿ ಮತ್ತು ಪತ್ನಿಯಾಗಿ ಜೊತೆಯಾಗಿ ಕಳೆಯಲು ಪವಿತ್ರ ಹೆಜ್ಜೆಯಿಡುತ್ತಿದ್ದೇವೆ. ಮದುವೆಯ ಶುಭಗಳಿಗೆಗಾಗಿ, ನಿನ್ನ ಕೈ ಹಿಡಿದು ಆ ಸಪ್ತಪದಿ ತುಳಿಯುವ ದಿನಕ್ಕಾಗಿ ಜೀವ ಹಂಬಲಿಸುತ್ತಿದೆ, ಮನಸ್ಸು ತುಡಿಯುತ್ತಿದೆ. ನಮ್ಮ ಹಿರಿಯರ ಆಶೀರ್ವಾದದೊಂದಿಗೆ ನಾವು ಒಂದಾಗುವ ಆ ಕ್ಷಣ ಹತ್ತಿರ ಬರುತ್ತಿದೆ.
ನನ್ನ ಪ್ರತಿಯೊಂದು ಕನಸಿನಲ್ಲೂ, ಭವಿಷ್ಯದ ಪ್ರತಿಯೊಂದು ಪುಟದಲ್ಲೂ ನೀನೇ ಇದ್ದೀಯ. ನಮ್ಮ ಸಂಸಾರದ ಆ ಸುಂದರ ಗೂಡನ್ನು ಕಟ್ಟಲು ನಾನು ಉತ್ಸುಕನಾಗಿದ್ದೇನೆ. ನನ್ನ ಬಾಲ್ಯದ ಗೆಳತಿಯೇ, ಜೀವನದ ಪ್ರತಿಯೊಂದು ಸಂತೋಷವೂ ನೀನೇ. ನನ್ನ ಬಾಳಿಗೆ ಸಿಕ್ಕಿದ ಅತ್ಯಮೂಲ್ಯ ವರವೂ ನೀನೇ. ಸದಾ ನಿನ್ನ ಮುಖದಲ್ಲಿ ನಗುವನ್ನು ಮೂಡಿಸಲು, ನಿನ್ನನ್ನು ರಾಣಿಯಂತೆ ನೋಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದೇನೆ. ನೀನು ರಾಣಿಯಾದರೆ ನಾನು ರಾಜನಲ್ಲವೇ? ನಮ್ಮ ಬಯಲುಸೀಮೆಯ ಈ ಪವಿತ್ರ ಮಣ್ಣಿನ ಸಾಕ್ಷಿಯಾಗಿ, ಆ ವಿಶಾಲವಾದ ಆಕಾಶದ ಸಾಕ್ಷಿಯಾಗಿ ನಾನು ನಿನಗೆ ಮಾತು ನೀಡುತ್ತಿದ್ದೇನೆ. ಬಾಲ್ಯದ ಸ್ನೇಹ ವೈವಾಹಿಕ ಜೀವನದ ಮಧುರ ಬಾಂಧವ್ಯಕ್ಕೆ ತಿರುಗುತ್ತಿರುವುದು ನನ್ನ ಪಾಲಿನ ಸೌಭಾಗ್ಯ. ಸಪ್ತಪದಿಯಾದ ಮೇಲೆ ಪ್ರಥಮ ರಾತ್ರಿಗೆ ಸಾವಿರ ಸಾವಿರ ಕನಸು ಕಾಣುವೆ. ಕೊನೆಯ ಉಸಿರಿರುವವರೆಗೂ ಕಣ್ರೆಪ್ಪೆಯಂತೆ ಕಾಯುವೆ. ರಾಣಿ ಜೇನಿನ ಜೇನು ಸವಿಯುತ ಜೀವನ ಸವಿಯಲು ತುದಿಗಾಲಲ್ಲಿ ಕಾದಿರುವೆ.
ನಿನ್ನೊಲವಿನ ರಾಜ್
(ರಾಜು)


