ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಸಿ. ಬಿ. ಎಸ್. ಇ. ಶಾಲೆಯಲ್ಲಿ ಶುಕ್ರವಾರ ರಕ್ತದಾನದ ಮಹತ್ವ ಸಾರುವ ವಿಶಿಷ್ಠ ಕಾರ್ಯಕ್ರಮ ನಡೆಯಿತು.
ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅವರ ಜನ್ಮದನಿ ಮತ್ತು ಮಕ್ಕಳ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಂಗವಾಗಿ ನಡೆದ ಈ ರಕ್ತದಾನ ಶಿಬಿರ ಉದ್ಘಾಟಿಸಿದ ಬಿ. ಎಲ್. ಡಿ. ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ಸಂಜೀವ ಬೆಂತೂರ ಮಾತನಾಡಿ, ಜೀವರಕ್,ಣೆಯಲ್ಲಿ ರಕ್ತದಾನದ ಮಹತ್ವವನ್ನು ವಿವರಿಸಿದರು. ಅಲ್ಲದೇ, ರಕ್ತದಾನ ಮಾಡುವುದರಿಂದ ಮನುಷನ್ಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ಹೇಳಿದರು.
ಬಿ.ಎಲ್.ಡಿ.ಇ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಸತೀಶ ಅರಕೇರಿ ಮಾತನಾಡಿ, ರಕ್ತದಾನ ಮತ್ತೋಬ್ಬರಿಗೆ ಜೀವದಾನ ಮಾಡಿದಂತೆ. ರಕ್ತದಾನದ ಬಗ್ಗೆ ಇರುವ ತಪ್ಪು ಮಾಹಿತಿಗಳಿಗೆ ಯಾರೂ ಕಿವಿಗೊಡಬಾರದು. ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆಗಳು ನಿಯಂತ್ರಣದಲ್ಲಿರುವ ವ್ಯಕ್ತಿಗಳೂ ಕೂಡ ರಕ್ತದಾನ ಮಾಡಬಹುದು ಎಂದು ಹೇಳಿದರು.
ಶಾಲೆಯ ಪ್ರಭಾರಿ ಪ್ರಾಚಾರ್ಯೆ ವಸುಧಾ ನಾರ್ವೇಕರ್ ಮಾತನಾಡಿ, ಮಕ್ಕಳ ಸಮುದಾಯ ಅಭಿವೃದ್ಧಿ ಕಾರ್ಯಕ್ರಮದ ಅಡಿಯಲ್ಲಿ ಈ ರಕ್ತದಾನ ಜಾಗೃತಿ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮಕ್ಕಳು ಮತ್ತು ಪೋಷಕರು ಉತ್ಸಾಹದಿಂದ ಪಾಲ್ಗೋಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿ. ಎಲ್. ಡಿ. ಇ ಸಂಸ್ಥೆಯ ಆಡಳಿತಾಧಿಕಾರಿ ವಿಲಾಸ ಬಗಲಿ, ಡಾ. ಭಾಗ್ಯಶ್ರೀ, ಶಾಲೆಯ ಹಿರಿಯ ಕಾರ್ಯಸಂಯೋಜಕಿ ದೀಪಾ ಜಂಬೂರೆ, ಜಲನಗರ ಐ.ಸಿ.ಎಸ್.ಇ ಶಾಲೆಯ ಶಿಕ್ಷಕರ, ಪಾಲಕರು ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕೆಲವು ಪೋಷಕರು ರಕ್ತದಾನ ಮಾಡಿದರು. ಅಲ್ಲದೇ, ನವರಾತ್ರಿಯ ಐದನೇ ದಿನದ ಅಂಗವಾಗಿ ಮಹಿಳೆಯರಿಗೂ ಅರಿಷಿಣ ಕುಂಕುಮ ನೀಡಿ, ಉಡಿ ತುಂಬುವ ಕಾರ್ಯಕ್ರಮವೂ ನಡೆಯಿತು.

