ನ್ಯಾಯಬೆಲೆ ಅಂಗಡಿಗಳ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ದಿಢೀರ್ ದಾಳಿ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್ ಪಾಟೀಲ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಿಂದಗಿ ಪಟ್ಟಣದ ಎಪಿಎಂಸಿ ಯಾರ್ಡ್ನಲ್ಲಿರುವ ನ್ಯಾಯಬೆಲೆ ಅಂಗಡಿ ಸಂಖ್ಯೆ ೧೫೮, ಸೋಂಪುರ ರಸ್ತೆ ಹಾಗೂ ನ್ಯಾಯಬೆಲೆ ಅಂಗಡಿ ಸಂಖ್ಯೆ ೧೫೬ಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳ ದಿಢೀರ್ ಪರಿಶೀಲನೆ ವೇಳೆ ನ್ಯಾಯಬೆಲೆ ಅಂಗಡಿಗಳಲ್ಲಿ ಗ್ರಾಹಕರಿಗೆ ವಿತರಿಸಲಾಗುವ ಪಡಿತರ ಅಕ್ಕಿಯ ತೂಕದ ಕುರಿತು ಗಂಭೀರ ಆರೋಪಗಳು ಕೇಳಿಬಂದಿವೆ. ಕೆಲವು ಗ್ರಾಹಕರಿಗೆ ನಿಗದಿತ ಪ್ರಮಾಣಕ್ಕಿಂತ ೪ರಿಂದ ೫ ಕೆ.ಜಿ.ವರೆಗೆ ಕಡಿಮೆ ತೂಕದಲ್ಲಿ ಅಕ್ಕಿ ನೀಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳದಲ್ಲೇ ತೂಕದ ಪ್ರಮಾಣವನ್ನು ಪರಿಶೀಲಿಸಿ ಪಡಿತರ ಪಡೆಯಲು ಬಂದಿದ್ದ ಗ್ರಾಹಕರಿಂದಲೂ ಅಧಿಕಾರಿಗಳು ಮಾಹಿತಿ ಪಡೆದುಕೊಂಡರು.
ಅಂಗಡಿಯಲ್ಲಿದ್ದ ಅಕ್ಕಿಯ ದಾಸ್ತಾನು, ವಿತರಣಾ ಪ್ರಮಾಣ, ದಾಖಲೆಗಳು ಹಾಗೂ ತೂಕದ ಸಾಧನಗಳನ್ನು ಪರಿಶೀಲಿಸಿ, ವಿತರಣೆ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ನಡೆಯುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು.
ಗ್ರಾಹಕರಿಗೆ ವಿತರಿಸಬೇಕಾದ ಪಡಿತರದಲ್ಲಿ ಯಾವುದೇ ರೀತಿಯ ಕಡಿತ ಅಥವಾ ತೂಕ ವಂಚನೆ ಮಾಡುವುದು ನಿಯಮಬಾಹಿರ. ಸರ್ಕಾರ ನಿಗದಿಪಡಿಸಿರುವ ಪ್ರಮಾಣದಂತೆ ಅರ್ಹ ಫಲಾನುಭವಿಗಳಿಗೆ ಪಡಿತರ ವಿತರಿಸಬೇಕು ಎಂದು ಅಧಿಕಾರಿಗಳು ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ, ತೂಕದಲ್ಲಿ ವಂಚನೆ ಮಾಡುತ್ತಿರುವುದು ಅಥವಾ ದಾಖಲೆಗಳಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ಅಂತಹ ಅಂಗಡಿ ಮಾಲೀಕರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.
ನ್ಯಾಯಬೆಲೆ ಅಂಗಡಿಗಳ ಮೂಲಕ ಬಡ ಕುಟುಂಬಗಳಿಗೆ ತಲುಪಬೇಕಾದ ಪಡಿತರ ಅಕ್ಕಿ ಮಧ್ಯವರ್ತಿಗಳ ಪಾಲಾಗದಂತೆ ಹಾಗೂ ಫಲಾನುಭವಿಗಳಿಗೆ ನಿಗದಿತ ಪ್ರಮಾಣದಲ್ಲಿ ಅಕ್ಕಿ ತಲುಪುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂಬ ಆಗ್ರಹವೂ ಸಾರ್ವಜನಿಕರಿಂದ ಕೇಳಿಬಂದಿದೆ. ಗ್ರಾಹಕರಿಗೆ ವಿತರಿಸುವ ಪಡಿತರದ ಪ್ರಮಾಣದಲ್ಲಿ ಯಾವುದೇ ರೀತಿಯ ವಂಚನೆ ಕಂಡುಬಂದರೂ ಅದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಿಯಮ ಉಲ್ಲಂಘಿಸುವ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

