ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆರೋಪ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ೧೩ ತಾಲೂಕುಗಳಲ್ಲಿಯೂ ಬರ ತಾಂಡವವಾಡುತ್ತಿದೆ, ಆದರೆ ಸರ್ಕಾರ ಮಾತ್ರ ಕೇವಲ ಮೂರು ತಾಲೂಕುಗಳು ಬರ ಪೀಡಿತ ಎಂದು ಘೋಷಣೆ ಮಾಡಿದೆ, ಉಳಿದ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಅಲ್ಲಿ ಪರಿಹಾರೋಪಾಯಗಳನ್ನು ಕೈಗೊಳ್ಳಲು ಸರ್ಕಾರದ ಬಳಿ ದುಡ್ಡಿಲ್ಲವೇ? ಸರ್ಕಾರದ ಖಜಾನೆ ಖಾಲಿಯಾಗಿರುವುದು ಖಾತ್ರಿಯಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ಹೊರಹಾಕಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ, ಇಂಡಿ, ಚಡಚಣ, ತಾಳಿಕೋಟೆ ಹೀಗೆ ಎಲ್ಲ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ, ಬೆಳೆದ ಬೆಳೆ ಕೈಗೆ ಬಾರದೇ ರೈತ ಚಿಂತಾಜನಕ ಸ್ಥಿತಿಯಲ್ಲಿದ್ದಾನೆ, ಮೊನ್ನೆ ಉಪಮುಖ್ಯಮಂತ್ರಿಗಳಾದ ಡಾ.ಜಿ. ಪರಮೇಶ್ವರ ಅವರು ಬರ ಪರಿಹಾರ ಕಾಮಗಾರಿ ಕೈಗೊಳ್ಳಲು ಸರ್ಕಾರದ ಬಳಿ ದುಡ್ಡಿನ ಕೊರತೆ ಇಲ್ಲ ಎಂದು ವಿಧಾನಸೌಧದಲ್ಲಿ ಹೇಳಿದ್ದರು. ಆದರೆ ಈಗ ಕೆಲವೇ ಗ್ರಾಮಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದ್ದಾರೆ.
ರಾಜಸ್ತಾನದ ಜೈಸಲ್ಮೇರ್ ನಂತರ ಅತೀ ಬರ ಪೀಡಿತ ಎಂಬ ಪ್ರದೇಶವಾಗಿರುವ ವಿಜಯಪುರ ಜಿಲ್ಲೆಯ ಕೇವಲ ೩ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಿ, ಉಳಿದ ತಾಲೂಕುಗಳ ರೈತರಿಗೆ ಘೋರ ಅನ್ಯಾಯ ಮಾಡಲಾಗಿದೆ, ರೈತರ ಸಹಾಯಕ್ಕೂ ಬಾರದಿದ್ದರೆ ಸರ್ಕಾರ ಇದ್ದಾದರೂ ಏನೂ ಪ್ರಯೋಜನ? ಅವೈಜ್ಞಾನಿಕ ಆರ್ಥಿಕ ನೀತಿಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸಹ ಸರ್ಕಾರದ ಬಳಿ ದುಡ್ಡಿಲ್ಲ ಎಂಬುದು ಖಾತ್ರಿಯಾದಂತಾಗಿದೆ ಎಂದು ಕಾರಜೋಳ ಹೇಳಿದ್ದಾರೆ.
ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ಚೆಲ್ಲಾಟವಾಡಬಾರದು, ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಬೇಕು, ರಾಜ್ಯದ ವಿವಿಧ ಭಾಗದ ಉಳಿದ ಅಗತ್ಯ ತಾಲೂಕುಗಳನ್ನು ಸಹ ಬರಪೀಡಿತ ಎಂದು ಘೋಷಿಸಿ ಸಮಸ್ತ ರೈತ ವಲಯದ ಹಿತ ಕಾಪಾಡಬೇಕು, ಈ ವಿಷಯದಲ್ಲಿ ಸರ್ಕಾರ ಮಾನವೀಯತೆಯಿಂದ ನಡೆದುಕೊಳ್ಳಬೇಕು ಎಂದು ಕಾರಜೋಳ ಹೇಳಿದ್ದಾರೆ.

