ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಹೆಸರು ಮರುನಾಮಕರಣ ಕುರಿತು ಸಚಿವ ರಾಮಲಿಂಗಾರೆಡ್ಡಿ ಅಭಿಮತ
ಬೆಂಗಳೂರು: ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಹೆಸರು ಮರುನಾಮಕರಣ ವಿಚಾರ ನನಗೆ ಗೊತ್ತಿಲ್ಲ. ಆದರೆ ಹೆಸರು ಬದಲಾವಣೆ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ ಎಂದು ರಾಮನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮಾಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಸರು ಬದಲಾವಣೆ ಮಾಡಿದರೆ ಯಾವುದೇ ನಷ್ಟ ಆಗಲ್ಲ. ಜೊತೆಗೆ ಜಿಲ್ಲೆಗೆ ಹೆಚ್ಚಿನ ಅನುದಾನ, ಮೂಲಭೂತ ಸೌಕರ್ಯಗಳು ಸಿಗಬೇಕು. ಆ ಉದ್ದೇಶದಿಂದ ಬದಲಾವಣೆ ಆದರೆ ತೊಂದರೆ ಇಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಸಚಿವರು ಐದು ತಿಂಗಳಿಂದ ಹಣ ತಿಂದಿಲ್ಲ ಎಂದು ಆಣೆ ಮಾಡಲಿ ಎನ್ನುವ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ , ಕುಮಾರಸ್ವಾಮಿ ಅವರ ಹೇಳಿಕೆಗೆ ಮಾನ್ಯತೆ ನೀಡಬೇಕಿಲ್ಲ ಎಂದು ನೇರವಾಗಿ ಹೇಳಿದರು.
ಚುನಾವಣೆ ಬಂದಾಗ ಯಾವ ಪಕ್ಷ ಅಧಿಕಾರದಲ್ಲಿರಬೇಕು ಅಂತ ಜನ ತೀರ್ಮಾನ ಮಾಡುತ್ತಾರೆ. ಕಳೆದ ಐದು ತಿಂಗಳ ಹಿಂದೆ ಜನ ನಿರ್ಧಾರ ಮಾಡಿ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಈ ಆಣೆ-ಪ್ರಮಾಣದ ಬಗ್ಗೆ ನನಗೆ ನಂಬಿಕೆ ಇಲ್ಲ. ಅವರ ಸರ್ಕಾರ ಇದ್ದಾಗ ಅವರೇನು ಮಾಡಿದ್ದಾರೆ ಅಂತ ಗೊತ್ತು. ನಮ್ಮ ಮೇಲೆ ಆರೋಪ ಮಾಡುವ ಬದಲು ಲೋಕಾಯುಕ್ತಕ್ಕೆ ದೂರು ಕೊಡಲಿ. ಇಲ್ಲ ಯಾವುದೇ ತನಿಖೆಗೆ ಒತ್ತಾಯ ಮಾಡಲಿ ಎಂದು ತಿರುಗೇಟು ನೀಡಿದರು.
ರಾಮನಗರಕ್ಕೆ ಬೆಂಗಳೂರಿನ ಕಸ ತರುವ ವಿಚಾರವಾಗಿ ಮಾತನಾಡಿದ ಅವರು, ಈ ವಿಚಾರ ನನಗೆ ಗೊತ್ತೇ ಇಲ್ಲ. ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ. ನನಗೆ ಮಾಹಿತಿ ಇಲ್ಲ. ನನ್ನ ಬಳಿ ಚರ್ಚೆ ಮಾಡದೇ ಇರುವುದನ್ನು ಹೇಗೆ ಮಾತನಾಡಲಿ. ಪತ್ರಿಕೆಗಳಲ್ಲಿ ಬಂದಿರುವುದು ಊಹಾಪೋಹ ಇರಬಹುದು ಎಂದು ಹೇಳಿದರು.
ಆದರೆ ಈ ಹಿಂದೆ ಬೃಹತ್ ಬೆಂಗಳೂರು ಮಹಾ ನಗರ ವ್ಯಾಪ್ತಿಯ ತ್ಯಾಜ್ಯ ವಿಲೇವಾರಿ ಮಾಡಲು ರಾಮನಗರ ಜಿಲ್ಲೆಯಲ್ಲಿ ಅಗತ್ಯ ಭೂಮಿ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸರ್ಕಾರ ಸೂಚನೆ ನೀಡಿರುವ ಸುದ್ದಿ ಹೊರಬಿದ್ದಿದ್ದು, ಸ್ಥಳೀಯರು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಬಿಬಿಎಂಪಿ ವ್ಯಾಪ್ತಿಯ ಕಸವನ್ನು ತಾಲೂಕಿನ ಕಸಬಾ ಹೋಬಳಿಯ ಹರಿಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿಲೇವಾರಿ ಮಾಡಲು ಗುರುತಿಸಲಾಗಿದೆ ಎಂಬ ಸುದ್ದಿ ಹೊರಬಿದ್ದ ಹಿನ್ನಲೆಯಲ್ಲಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು.