ವಿಬಿ-ಜಿ ರಾಮ್ ಜಿ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮೀಣ ಭಾಗದ ಕೂಲಿಕಾರರಿಗೆ ನಿರಂತರ ಉದ್ಯೋಗ ಒದಗಿಸುವುದು ಹಾಗೂ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಣಮುಚನಾಳ ಹಾಗೂ ಜುಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಖತಿಜಾಪೂರ ಗ್ರಾಮಗಳಲ್ಲಿ ನಡೆಯುತ್ತಿರುವ ಕಾಲುವೆ ಹಾಗೂ ನಾಲಾ ಪುನಶ್ಚೇತನ ಕಾಮಗಾರಿ ಸ್ಥಳಗಳಿಗೆ ಅವರು ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆಲಸದ ಸ್ಥಳದಲ್ಲಿ ಕೂಲಿಕಾರ್ಮಿಕರಿಗೆ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಡ್ಡಾಯವಾಗಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪರಿಶೀಲನೆ ವೇಳೆ ತಾಲೂಕು ಪಂಚಾಯಿತಿ ಇಒ ಜೆ.ಎಸ್. ಪಠಾಣ್, ಸಹಾಯಕ ನಿರ್ದೇಶಕ ವಿ.ಎಸ್. ಹಿರೇಮಠ, ಪಿಡಿಒ ಪವಿತ್ರಾ ನೀಲಕೇಣಿ, ತಾಂತ್ರಿಕ ಸಂಯೋಜಕ ಮಹೇಶ್ ಇಂಗಳೇಶ್ವರ, ಐಇಸಿ ಸಂಯೋಜಕರಾದ ಶಾಂತಪ್ಪ ಇಂಡಿ, ಮುತ್ತುರಾಜ್ ಸಿಂಗೆ ಸೇರಿದಂತೆ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

