ಲೇಖನ
– ಶೀತಲ್ ಹೆಗಡೆ.
ನಿರ್ವಾಹಕಿ
’ನಮ್ಮ ಕಥಾ ಅರಮನೆ’
ಉದಯರಶ್ಮಿ ದಿನಪತ್ರಿಕೆ
ಜೀವನದಲ್ಲಿ ಬದಲಾವಣೆ ಅನಿವಾರ್ಯ. ಪ್ರಕೃತಿಯಿಂದ ಹಿಡಿದು ಮಾನವನ ಬದುಕಿನವರೆಗೂ ಪ್ರತಿಯೊಂದೂ ಬದಲಾವಣೆಯ ಹಾದಿಯಲ್ಲೇ ಸಾಗುವುದು. ಬದಲಾವಣೆಯನ್ನು ಸ್ವೀಕರಿಸಿದವರು ಬೆಳೆಯುತ್ತಾರೆ. ಅದನ್ನು ಅನುಸರಿಸದೇ ಇದ್ದವರು ಕಾಲದ ಹಿಂದೆಯೇ ಇರುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬದಲಾವಣೆಯ ಹೆಜ್ಜೆಯನ್ನು ಧೈರ್ಯದಿಂದಲೇ ಇಡಬೇಕು.
ಬದಲಾವಣೆಯೆಂದರೆ ಕೇವಲ ಹೊಸತನ್ನು ಅಳವಡಿಸಿಕೊಳ್ಳುವುದಲ್ಲ ಬದಲಾಗಿ ನಮ್ಮಲ್ಲಿರುವ ದೋಷಗಳನ್ನು ತಿದ್ದಿಕೊಂಡು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಎಂದರ್ಥ. ಕೆಟ್ಟ ಅಭ್ಯಾಸವನ್ನು ಬಿಟ್ಟು ಒಳ್ಳೆಯ ಅಭ್ಯಾಸವನ್ನು ರೂಢಿಸಿಕೊಳ್ಳುವುದು, ನಕಾರಾತ್ಮತೆಯನ್ನು ಮರೆತು ಸರಾರಾತ್ಮತೆಯ ಕಡೆಗೆ ಒಲವನ್ನು ರೂಢಿಸಿಕೊಳ್ಳುವುದು. ಸಮಯದ ಮಹತ್ವವನ್ನು ಅರಿತು ಶಿಸ್ತಿನ ಜೀವನ ನಡೆಸುವುದು. ಇವೆಲ್ಲ ಬದಲಾವಣೆಯ ಹೆಜ್ಜೆಗಳೇ.
ಸಮಾಜದ ಅಭಿವೃದ್ಧಿಯು ವ್ಯಕ್ತಿಯ ಬದಲಾವಣೆಯಿಂದಲೇ ಆಗುವುದು. ವ್ಯಕ್ತಿಯ ಉತ್ತಮ ಬದಲಾವಣೆ ಇತರರಿಗೆ ಮಾದರಿಯಾಗುವುದು. ಪರಿಸರ ಸಂರಕ್ಷಣೆ, ಸ್ವಚ್ಛತೆ, ಶಿಕ್ಷಣ, ಮಾನವೀಯತೆ ಹಾಗೂ ಸಹಾನುಭೂತಿ ಇಂತಹ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಸಮಾಜವು ಅಭಿವೃದ್ಧಿಯೆಡೆಗೆ ಸಾಗುವುದು.
ಸಮಾಜದಲ್ಲಿ ಬದಲಾವಣೆ ಯಾವ ಯಾವ ಕ್ಷೇತ್ರದಲ್ಲಿ ಆಗುತ್ತಿದೆ ಎಂಬುದಾಗಿ ಒಮ್ಮೆ ಗಮನಹರಿಸಿದಾಗ..
೧) ಕೃಷಿಯಲ್ಲಿ ಹೊಸ ಹೊಸ ತಂತ್ರಜ್ಞಾನ ಅಳವಡಿಕೆ, ಯಾಂತ್ರೀಕರಣ,
೨)ಶಿಕ್ಷಣದಲ್ಲಿ ಆನ್ಲೈನ್ ಕಲಿಕಾ ವಿಧಾನ, ಈಗಂತೂ AI ದಮೂಲಕವೂ ಹೊಸ ಹೊಸ ವಸ್ತುವಿಷಯಗಳಿಗೆ ಸಂಬಂಧಪಟ್ಟಂತೆ ಮಾಹಿತಿ ದೊರಕುವುದು.

೩)ತಂತ್ರಜ್ಞಾನದಲ್ಲಿ ಹೊಸ ಹೊಸ ಯಂತ್ರಗಳ ಅಳವಡಿಕೆಯಿಂದ ನೂತನ ಆವಿಷ್ಕಾರ.
೪) ನಮ್ಮ ಹಿರಿಯರ ನಡವಳಿಕೆ ಅಂದು ಇಂದು, ನಮ್ಮ ತಂದೆ ತಾಯಿಯರ ಆಲೋಚನೆಯಲ್ಲಿ, ಪ್ರಬುದ್ಧತೆಯಲ್ಲಿ ಆಕಾಶ ಭೂಮಿಯಷ್ಟು ಅಂತರ ಕಾಣತಿದೀವಿ.
೫) ಪರಿಸರದಲ್ಲಿ ಹವಾಮಾನ ಪ್ರತಿಕೂಲ, ಬಿರುಗಾಳಿ, ನೆರೆ-ಬರ ಒಣ ಪ್ರದೇಶ ಹೀಗೆ ನಾನಾತರನಾದ ಪ್ರತಿಕೂಲ ವಾತಾವರಣ ಕಾಣುತ್ತಿದೆ. ಇವೆಲ್ಲ ‘ಗ್ಲೋಬಲ್ ವಾರ್ಮಿಂಗ್’ ನ ಕಾರಣದಿಂದ.
೬) ಸಂಪ್ರದಾಯ, ಆಚರಣೆ, ಮೂಢಪದ್ಧತಿಗಳಲ್ಲಿ ಇತ್ತೀಚೆಗೆ ಗಣನೀಯ ಬದಲಾವಣೆ ಕಂಡುಬರುತ್ತಿದೆ. ಅಸ್ಪ್ರಶ್ಯರನ್ನು ಕೀಳಾಗಿ, ಅವರನ್ನು ಮುಟ್ಟದೇ ಅವರನ್ನು ನಮ್ಮಿಂದ ಬೇರ್ಪಡಿಸಿ ನೋಡುವ ಕಾಲ ಹೋಗಿ ಇತ್ತೀಚೆಗೆ ಅವರಿಗೆಂದೇ ವಿಶೇಷ ರಿಯಾಯಿತಿ ಎಲ್ಲ ಕ್ಷೇತ್ರದಲ್ಲಿ ಕಾಣಸಿಗುತ್ತಿದೆ.
೭) ತೃತೀಯ ಲಿಂಗಿಗಳು.. ಮಂಗಳಮುಖಿಯರಿಗೆ ಅವರನ್ನು Transgender ಎಂದು ಗುರುತಿಸಲಾಗುತ್ತದೆ. ಅವರಿಗೆಂದೇ ಗುರುತಿನ ಚೀಟಿ ಕೇಂದ್ರ ಸರ್ಕಾರದಿಂದ, ವಸತಿ ಸೌಕರ್ಯ, ಆರ್ಥಿಕ ಭದ್ರತೆ, ಮಾಸಿಕ ವೇತನ ಪಡೆಯುವ ಸೌಲಭ್ಯ, ಸಂವಿಧಾನ ಅವರಿಗೆಂದೇ ಕಾನೂನು ರಕ್ಷಣೆ ಪಡೆಯುವ ಹಕ್ಕು ಕೊಟ್ಟಿದೆ. ದೇಶದ ನಾಗರೀಕನಾಗಿ ಇರಬೇಕಾದ ವೀಶೇಷ ಸೌಲಭ್ಯ ಹಾಗೂ ಹಕ್ಕುಗಳಲ್ಲೊಂದಾದ ಮತಚಲಾಯಿಸುವ ಹಕ್ಕು ಕೂಡ ಇವರಿಗೆ ನೀಡಿದೆ. ಇತ್ತೀಚೆಗೆ ಇವರಿಗೆ ಶಿಕ್ಷಣದಲ್ಲಿ ಯಾವುದೇ ತಾರತಮ್ಯ ಎಣಿಸುವಂತಿಲ್ಲ. ಅನೇಕರು ಪೋಲಿಸ್ ಅಧಿಕಾರಿಗಳಾದ ಹಲವಾರು ಉದಾಹರಣೆಗಳಿವೆ.

೮) ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆ ದಿನದಿಂದ ದಿನಕ್ಕೆ ನಡೆಯುತ್ತಿದೆ. ಇಂದಿನ ಕಲಬೆರಕೆ ಅಪೌಷ್ಟಿಕ ಆಹಾರ ಹಾಗೂ ಕಂಪ್ಯೂಟರೀಕರಣದಿಂದ ಯುವಜನತೆಯಲ್ಲಿ ಬಂಜೆತನ ಹೆಚ್ಚಾಗುತ್ತಿದೆ. ಹೀಗಾಗಿ ಗಂಡಸರು ತಮ್ಮ ವೀರ್ಯವನ್ನು ಹಾಗೂ ಹೆಂಗಸರು ತಮ್ಮ ಅಂಡಾಣುವನ್ನು ಕಾಯ್ದಿರಿಸಿ ಮುಂದಿನ ದಿನಗಳಲ್ಲಿ IVF ಮೂಲಕ ಸಂತಾನವನ್ನು ಪಡೆಯಲು ಉಪಯೋಗಿಸುವ advance ವಿಧಾನವನ್ನು ಆರಿಸಿಕೊಂಡಿರುವರು. ಇದರಿಂದ ಅವರಿಗೆ ಬೇಕಾದ ಕಾಲಕ್ಕೆ ಮಕ್ಕಳನ್ನು ಹಾಗೂ ಮಕ್ಕಳನ್ನು ಪಡೆಯುವ ಭಾಗ್ಯವನ್ನು ಯಾವ ತಂದೆ ತಾಯಿ ಕಳೆದುಕೊಂಡಿರುತ್ತಾರೋ ಅವರಿಗೆ ಈ ಬೆಳವಣಿಗೆ ಆಶಾದಾಯಕವಾದ ವರವಾಗುವುದರಲ್ಲಿ ಸಂಶಯವಿಲ್ಲ.
೯) ಆಧುನೀಕರಣ, ಸಮಾಜೀಕರಣ, ಇತ್ತೀಚೆಗೆ ಅಭಿವೃದ್ಧಿ ಹೊಂದಿದ ಅನೇಕ ದೇಶಗಳ ವ್ಯಾವಹಾರಿಕ ನೆಲೆಯ ಮಾಹಿತಿಗಳಿಂದ ಜನರಲ್ಲಿ ತಾವೂ ಅವರಂತಾಗುವ( ಅವರ ಜನಜೀವನ ಆಲೋಚನೆ, ವ್ಯವಹಾರಿಕ ಶೈಲಿಗಳ ಅನುಕರಣೆ) ಎಂಬ ಮನೋಭಾವ ಬೆಳೆಯುತ್ತಿದೆ. ಇದು ದೇಶದ ಇತರೇ ಜನರೊಡನೆ ಬೆರೆಯುವಿಕೆಗೆ ತುಂಬಾ ಅನುಕೂಲವಾಗುತ್ತದೆ.
೧೦) ಎಲ್ಲಕ್ಕಿಂತ ಮಿಗಿಲಾಗಿ ಮೊದಲು ‘ ನಮಗೆ ಕುಟುಂಬ, ಸಮಾಜ, ದೇಶ, ರಾಷ್ಟ್ರ ಏನು ಕೊಟ್ಟಿದೆ ಎಂಬುದರ ಬದಲು ನಾವೇನು ಕೊಡಬಹದು’ ಎಂದು ಆಲೋಚಿಸಿದರೆ ಮುಂದಿನ ಅಭಿವೃದ್ಧಿ ಮಾರ್ಗ ಸುಲಭವಾಗುತ್ತದೆ.
‘ಅಜ್ಜನೆಟ್ಟಿದ ಆಲದಮರ’ಕ್ಕೆ ನೇಣು ಹಾಕಿಕೊಳ್ಳುವ ಬದಲು ಹೊಸತು ಏನಾದರೂ ಸಂಚಲನ, ಪ್ರೇರಣಾದಾಯಕ ಕೆಲಸ, ಚಿಂತನೆಗೆ ಒರೆಹಚ್ಚುವ ಕಾರ್ಯ, ನಮ್ಮ ಸುತ್ತಮುತ್ತಲಿನವರು ನಮ್ಮ ಬಗ್ಗೆ ಹೆಮ್ಮೆ ಪಡುವಂತಹದ್ದು, ಇತರರಿಗೆ ಮಾರ್ಗದರ್ಶನ ನೀಡುವಂತಹದ್ದನ್ನು ಮಾಡಿದರೆ ಅದು ನಿಜಕ್ಕೂ ‘ ಬದಲಾವಣೆಯತ್ತ ಒಂದು ಹೊಸ ಹೆಜ್ಜೆ, ಇದು ನಮ್ಮ ವ್ಯಕ್ತಿತ್ವದಲ್ಲಿ ಕಂಡುಬರುವ ಸಕಾರಾತ್ಮಕ ಬೆಳವಣಿಗೆ ಹಾಗೂ ಬದಲಾವಣೆ ಅನ್ನಬಹುದು. ಇಂತಹ ಯೋಜನೆಯನ್ನು ನಮ್ಮ ಭಾರತದೇಶದ ಪ್ರಜೆಯಾದ ಪ್ರತಿಯೊಬ್ಬರೂ ಯೋಚಿಸಬೇಕಾದ ಹಾಗೂ ಕಾರ್ಯರೂಪಕ್ಕೆ ತರಬೇಕಾದ ಯೋಜನೆಯಾಗಿದೆ.


