ಮಾಶಾಳ ಗ್ರಾಮ ವ್ಯಾಪ್ತಿಯ ಬಿಂಗೋಳಿಯಲ್ಲಿ ಗಾಂಜಾ ಬೆಳೆದ ಜಮೀನಿಗೆ ಖಾಕಿ ದಾಳಿ | 30 ಕೆಜಿ ಗಾಂಜಾ ವಶ
ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ಕಬ್ಬಿನ ಗದ್ದೆಯ ಮರೆಯಲ್ಲಿ ಯಾರಿಗೂ ಅನುಮಾನ ಬಾರದಂತೆ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಜಮೀನಿನ ಮೇಲೆ ಅಫಜಲಪುರ ಪೊಲೀಸರು ದಾಳಿ ನಡೆಸಿ, ಸುಮಾರು 30 ಕೆಜಿ ಗಾಂಜಾವನ್ನು ವಶಪಡಿಸಿಕೊಂಡು, ಮುತ್ತಯ್ಯ ಹಿರೇಮಠ ಎಂಬಾತನನ್ನು ಬಂಧಿಸಿದ್ದಾರೆ.
ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ವ್ಯಾಪ್ತಿಯ ಬಿಂಗೋಳಿ ಹೊರವಲಯದಲ್ಲಿರುವ ಜಮೀನಿನಲ್ಲಿ ಕಬ್ಬಿನ ಬೆಳೆಯ ನಡುವೆ ಗಾಂಜಾ ಗಿಡಗಳನ್ನು ಬೆಳೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಮಾಹಿತಿ ಆಧರಿಸಿ ಡಿವೈಎಸ್ಪಿ ತಮ್ಮರಾಯ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಲಖನ್ ಮಸಗುಪ್ಪಿ ನೇತೃತ್ವದ ಪೊಲೀಸ್ ತಂಡ ಜಮೀನಿನ ಮೇಲೆ ದಾಳಿ ನಡೆಸಿತು.
ದಾಳಿ ವೇಳೆ ಕಬ್ಬಿನ ಗಿಡಗಳ ನಡುವೆ ಬೆಳೆದಿದ್ದ ಗಾಂಜಾ ಗಿಡಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅಲ್ಲದೆ, ಬೆಳೆದು ಒಣಗಿಸಿ ಪುಡಿ ಮಾಡಿ ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಸುಮಾರು 30 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಬ್ಬು ಎತ್ತರವಾಗಿ ಬೆಳೆದಿದ್ದರಿಂದ ಅವುಗಳ ಮರೆಯಲ್ಲಿ ಗಾಂಜಾ ಬೆಳೆಸಲಾಗುತ್ತಿತ್ತು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಯ್ಯ ಹಿರೇಮಠನನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಮಾದಕ ದ್ರವ್ಯಗಳ ನಿಯಂತ್ರಣ ಕಾಯ್ದೆಯಡಿ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಡಿವೈಎಸ್ಪಿ ತಮ್ಮರಾಯ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಲಖನ್ ಮಸಗುಪ್ಪಿ, ಪಿಎಸ್‌ಐ ಶ್ರೀಶೈಲ ಅಂಬಾಟೆ ಹಾಗೂ ಮಾಶಾಳ ಪೊಲೀಸ್ ಔಟ್‌ಪೋಸ್ಟ್‌ನ ನಾಲ್ಕು ಜನ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

