ಇಂದು ನಾವು ನಮ್ಮ ಮಕ್ಕಳಿಗೆ ಎಲ್ಲ ರೀತಿಯ ಜ್ಞಾನವನ್ನು ನೀಡಬಹುದು ಆದರೆ ಆರೋಗ್ಯವನ್ನಲ್ಲ. ಆರೋಗ್ಯವನ್ನು ಪ್ರಕೃತಿ ಸಹಜವಾದ ವಾತಾವರಣದಲ್ಲಿ ಪ್ರತಿಯೊಬ್ಬರೂ ಪಡೆಯಲೇಬೇಕು.
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ – ಗದಗ
ಉದಯರಶ್ಮಿ ದಿನಪತ್ರಿಕೆ
ಪ್ರತಿಯೊಬ್ಬ ವ್ಯಕ್ತಿಯು ತನ್ನ ಸತತ ಕಾರ್ಯನಿರ್ವಹಣೆಯ ಜೀವನ ಶೈಲಿಯಲ್ಲಿ ಕೊಂಚ ಬಿಡುವನ್ನು ಅನುಭವಿಸಲು ಸದಾ ಸಿದ್ಧನಾಗಿರುತ್ತಾನೆ. ಆದರೆ ರೈತನಿಗೆ ಬಿಡುವೆಲ್ಲಿಯದು. ಹಾಗೆಯೇ ಪಟ್ಟಣದ ಮತ್ತು ಹಳ್ಳಿಯ ಮಕ್ಕಳನ್ನು ಗಮನಿಸಿದಾಗ ಪಟ್ಟಣದ ಮಕ್ಕಳಿಗಿಂತ ತುಸು ಹೆಚ್ಚಿನ ಕಾರ್ಯ ಕೌಶಲ್ಯಗಳ ಅರಿವು, ಜಾಣ್ಮೆ, ಸಾಮಾಜಿಕ,ಧಾರ್ಮಿಕ, ಸಾಂಸ್ಕೃತಿಕ, ಐತಿಹಾಸಿಕ ತಿಳುವಳಿಕೆಗಳು ಮತ್ತು ಸಾಮಾನ್ಯ ಜ್ಞಾನ ಹಳ್ಳಿಯ ಮಕ್ಕಳಲ್ಲಿ ಹೆಚ್ಚಿರುತ್ತದೆ.
ಅಲ್ಲಿನ ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಶಹರದ ಮಕ್ಕಳಿಗಿಂತ ತುಸು ಹೆಚ್ಚಿನ ಬೆಳವಣಿಗೆಯನ್ನು ಹೊಂದಿದ್ದು ಇದನ್ನು ಸರ್ವಾಂಗೀಣ ಬೆಳವಣಿಗೆ ಎಂದು ಕರೆಯಬಹುದು.
ಕೇವಲ ಒಂದು ತಲೆಮಾರಿನ ಹಿಂದಿನವರು ಚಿಕ್ಕಂದಿನಲ್ಲಿ ಮನೆಯ ಮುಂದೆ, ಮರದ ಕೆಳಗೆ, ಹೊಳೆ ಹಳ್ಳಗಳ ಬದಿಯಲ್ಲಿ ಇರುವ ಬಯಲು ಜಾಗದಲ್ಲಿ ದೈಹಿಕ ಶ್ರಮವನ್ನು ಬೇಡುವ ಆಟಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಚಿನ್ನಿದಾಂಡು, ಸರಬಡಿಗೆ, ಕಣ್ಣ ಮುಚ್ಚಾಲೆ, ಮರಕೋತಿ ಆಟ ಮತ್ತು ಹೆಣ್ಣು ಮಕ್ಕಳಾದರೆ ಕುಂಟೆಬಿಲ್ಲೆ, ಆಣೆಕಲ್ಲು ಕುಂಟಾಟಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಈ ರೀತಿಯ ಆಟಗಳನ್ನು ಆಡುತ್ತಲೇ ಅವರು ವಿವೇಚನ ಶಕ್ತಿ ಸೋಲು, ಗೆಲುವು, ಹೊಂದಾಣಿಕೆ, ನಾಯಕತ್ವ ಗುಣಗಳನ್ನು ಕಲಿಯುತ್ತಿದ್ದರು. ನಾವು ಪಠ್ಯ ಪುಸ್ತಕಗಳಲ್ಲಿ ಕಲಿಯುವ ಭೂಗೋಳ, ಪೌರನೀತಿ, ವಿಜ್ಞಾನ,ಗಣಿತ ವಿಷಯಗಳ ಪಾಠಗಳು ಪ್ರಾಯೋಗಿಕವಾಗಿ ನಮಗೆ ಪರಿಸರದಿಂದ ದೊರೆಯುತ್ತವೆ.
ಚಂಬೆಳಕಿನ ಕವಿ ಚನ್ನವೀರ ಕಣವಿಯವರು ಹೇಳಿದಂತೆ ಮನುಷ್ಯ ನಿಸರ್ಗಕ್ಕೆ ಹತ್ತಿರವಾದಷ್ಟು ಆತನ

ಸರ್ವತೋಮುಖ ಬೆಳವಣಿಗೆ ಆಗುತ್ತದೆ. ಬಹಳಷ್ಟು ಜನ ಸಾಹಿತಿಗಳು ನಿಸರ್ಗದ ಹತ್ತಿರದಲ್ಲಿದ್ದು ಅದನ್ನು ಅನುಭವಿಸಿ ಆ ಸ್ಪೂರ್ತಿಯಿಂದ ಬರೆದಾಗ ಇನ್ನಷ್ಟು ಪ್ರಭಾವಶಾಲಿಯಾಗಿ ಅವರ ಕವನಗಳು, ಲೇಖನಗಳು ಒಡಮೂಡುತ್ತವೆ ಎಂದು ಹೇಳುತ್ತಾರೆ. ಪೂರ್ಣಚಂದ್ರ ತೇಜಸ್ವಿಯವರು ಕೂಡ ಇದಕ್ಕೆ ಹೊರತಾಗಿರಲಿಲ್ಲ.. ಅವರಂತೂ ನಿಸರ್ಗದ ಶಿಶುವೇ ಆಗಿ ಹೋಗಿದ್ದರು.
ನಿಸರ್ಗದ ಮಡಿಲಲ್ಲಿ ಪಾದಯಾತ್ರೆಗೆ ಹೋಗುವಾಗ ನಮಗೆ ವಾಯು, ಅಗ್ನಿ, ಜಲ, ಆಕಾಶ ಮತ್ತು ಪೃಥ್ವಿ ತತ್ವಗಳ ಅಂಶಗಳು ದೊರೆಯುತ್ತವೆ. ಇಂದು ನಾವು ನಮ್ಮ ಮಕ್ಕಳಿಗೆ ಎಲ್ಲ ರೀತಿಯ ಜ್ಞಾನವನ್ನು ನೀಡಬಹುದು ಆದರೆ ಆರೋಗ್ಯವನ್ನಲ್ಲ. ಆರೋಗ್ಯವನ್ನು ಪ್ರಕೃತಿ ಸಹಜವಾದ ವಾತಾವರಣದಲ್ಲಿ ಪ್ರತಿಯೊಬ್ಬರೂ ಪಡೆಯಲೇಬೇಕು. ನಿಸರ್ಗ ಸಹಜವಾಗಿ ನಮಗೆ ದೊರೆಯುವ ವಾಯುವಿನ ಮಹತ್ವ ನಮಗೆ ತಿಳಿದದ್ದು ಕರೋನಾ ಪ್ಯಾಂಡೆಮಿಕ್ ಸಮಯದಲ್ಲಿ ಅದಕ್ಕೂ ಮುನ್ನ ನಾವು ಉಸಿರಾಡಲು ಅವಶ್ಯಕವಾದ ಜೀವದಾಯಿನಿ ಆಮ್ಲಜನಕದ ಕುರಿತು ನಮಗೆ ಅಷ್ಟೇನು ಅರಿವಿರಲಿಲ್ಲ.

ವಿಶೇಷವಾಗಿ ಕಾಡುಗಳ ಅವಶ್ಯಕತೆ ಕುರಿತು ನಮಗೆ ಅರಿವಿರಬೇಕು. ಇಡೀ ಜಗತ್ತು ಜನಸಂಖ್ಯೆಯ ಸ್ಪೋಟದಿಂದಾಗಿ ಕಾಡನ್ನು ಒತ್ತುವರಿ ಮಾಡಿಕೊಂಡಿದ್ದು
ನಮ್ಮ ಮೂಲಭೂತ ಅವಶ್ಯಕತೆಗಳಿಗೆ ನಾವು ಆಮ್ಲಜನಕವನ್ನು ಹೊಂದಲೇಬೇಕಾಗಿದೆ.
ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಈಗಾಗಲೇ ಸಾಕಷ್ಟು ಗೊಬ್ಬರ, ರಾಸಾಯನಿಕಗಳನ್ನು ಹಾಕಿ ನಾವು ಹೊಲವನ್ನು ಬಂಜರು ಮಾಡಿದ್ದೇವೆ. ನಮ್ಮ ಕೃಷಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡು ವಿಷಭೂಮಿಯಾಗಿ ಪರಿಣಮಿಸಿದೆ. ನಾವು ಕುಡಿಯುವ ನೀರು ಕೂಡ ರಾಸಾಯನಿಕಯುಕ್ತವಾಗಿದ್ದು ವಿಷಪೂರಿತವಾಗಿವೆ.
ಕೇವಲ ನಾಲ್ಕರಿಂದ ಐದು ಜನ ಸದಸ್ಯರಿರುವ ಮನೆಗಳನ್ನು ಕೂಡ ವಿಶಾಲವಾಗಿರಲಿ ಎಂಬ ಕಾರಣಕ್ಕೆ ಎರಡು-ಮೂರು ಅಂತಸ್ತುಗಳಷ್ಟು ಎತ್ತರಕ್ಕೆ ಕಟ್ಟಿ ಬಿಡುವ ನಾವುಗಳು ಇದೇ ರೀತಿ ಪ್ರತಿಯೊಂದು ಮನೆಯವರು ಹೀಗೆಯೇ ಬಿತ್ತಿ ಬೆಳೆಯುವ ಭೂಮಿಯನ್ನು ಒತ್ತುವರಿ ಮಾಡಿ ಕೃಷಿ ಭೂಮಿಯನ್ನು
ಔದ್ಯಮಿಕ ಮತ್ತು ರಾಸಾಯನಿಕಗಳ ಸುರಿಯುವಿಕೆಗೆ
ಏನು ಮಾಡುತ್ತೇವೆ ಇದರಿಂದ ಭೂಮಿ ಬಂಜರಾಗುತ್ತದೆ. ಬಂಗಾರಕ್ಕಿಂತ ಹೆಚ್ಚು ಭೂಮಿಯ ಬೆಲೆ ಇದೆ ಎಂದು ಕೃಷಿ ಭೂಮಿಯಲ್ಲಿ ಹಣವನ್ನು ಹೂಡಿಕೆ ಮಾಡುವ ನಾವುಗಳು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತೇವೆ. ಇನ್ನು ತನಗೆ ಒಮ್ಮಿಂದೊಮ್ಮೆಲೆ ದೊರೆಯುವ ಹಣವನ್ನು ರೈತ ಮನೆ ಕಟ್ಟಲು ಮಕ್ಕಳ ಓದು ವಿದ್ಯಾಭ್ಯಾಸಕ್ಕೆ ಬಳಸುತ್ತಾನೆ, ಮತ್ತೆ ಕೆಲವೊಮ್ಮೆ ಐಷಾರಾಮಿ ಖರ್ಚುಗಳಿಗೆ ಆತನ ಹಣ ಪೋಲಾಗಿ ಅತ್ತ ಭೂಮಿಯೂ ಇಲ್ಲ ಇತ್ತ ಹಣವೂ ಇಲ್ಲ ಎಂಬಂತಹ ಪರಿಸ್ಥಿತಿ ಏರ್ಪಡುತ್ತದೆ. ತನ್ನ ಹೊಲಕ್ಕೆ ತಾನೇ ಯಜಮಾನನಾಗಿದ್ದ ರೈತ ಹಳ್ಳಿಯಿಂದ ನಗರಕ್ಕೆ ವಲಸೆ ಬಂದು ಅಲ್ಲಲ್ಲಿ ಕೂಲಿ ಕೆಲಸಗಳಲ್ಲಿ ತೊಡಗಿಕೊಳ್ಳುವಂತಹ ಪರಿಸ್ಥಿತಿ ಆತನಿಗೆ ಬಂದೊದಗುತ್ತದೆ.
ಹೊಲವಾಗಿ ಉತ್ತು ಬಿತ್ತು ಬೆಳೆ ಬೆಳೆಯಲ್ಪಡುತ್ತಿದ್ದ ಭೂಮಿಯು ನಿವೇಶನಗಳಾಗಿ ಪರಿವರ್ತಿಸಲ್ಪಟ್ಟು ಮನೆಯ ಮೇಲೆ ಮನೆ ಕಟ್ಟಿ ಕಾಂಕ್ರೀಟ್ ಕಾಡಾಗಿ ಪರಿವರ್ತನೆಯಾಗುತ್ತದೆ. ಒಂದು ಹಂತದವರೆಗೆ ಇದೆಲ್ಲವೂ ಸರಿಯೇ ಎಂದಾದರೆ ಮನುಷ್ಯ ತಿನ್ನುವುದೇನು?
ಮನೆಗಳನ್ನು ಐಷಾರಾಮಿ ವಸ್ತುಗಳನ್ನು ನಮ್ಮ ನೌಕರಿಗಳನ್ನು ನಾವು ತಿನ್ನಲು ಸಾಧ್ಯವಿಲ್ಲ ಗೂಗಲ್ನಿಂದ ನಾವು ರೊಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದೇನಿದ್ದರೂ ಹೊಲಗಳಲ್ಲಿ ಬಿತ್ತಿ ಬೆಳೆಯಲ್ಪಡಲೇಬೇಕು. ಬದುಕಿನ ಎಲ್ಲಾ ಸುಖಗಳನ್ನು ಮನೆ, ಆಸ್ತಿ ಖರೀದಿಯಲ್ಲಿ ತೊಡಗಿಸಿಕೊಳ್ಳುವ ನಾವುಗಳು ಆಹಾರಕ್ಕಾಗಿ ಭೂಮಿಯನ್ನು ಹೊಂದಿರಲೇಬೇಕು. ಆ ಭೂಮಿಯ ಬೆಳೆ ನಮ್ಮೆಲ್ಲರ ಹೊಟ್ಟೆಯನ್ನು ತುಂಬಿಸುವ ನಿಟ್ಟಿನಲ್ಲಿ ನಾವು ಈ ಪ್ರಕೃತಿಯನ್ನು ಉಳಿಸಿ ಬೆಳೆಸುವ ಯೋಚನೆ ಮಾಡಲೇಬೇಕು.


