ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಾಹನ, ಜನದಟ್ಟಣೆ ನಿಯಂತ್ರಿಸುವ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎನ್ ಎಚ್ ಎಂ ಕಟ್ಟಡದಲ್ಲಿ ನಡೆಯುತ್ತಿದ್ದ ಒಣದ್ರಾಕ್ಷಿ ಆಫ್‌ಲೈನ್ ಹರಾಜು ಸ್ಥಳವನ್ನು ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಈ ಹಿಂದೆ ಎಪಿಎಂಸಿಯ ಎನ್‌ಎಚ್‌ಎಂ (ರಾಷ್ಟ್ರೀಯ ತೋಟಗಾರಿಕೆ ಮಿಷನ್) ಕಟ್ಟಡದಲ್ಲಿ ಪ್ರತಿ ಗುರುವಾರ ಒಣದ್ರಾಕ್ಷಿ ಆಫ್‌ಲೈನ್ (ಬಹಿರಂಗ ಹರಾಜು) ಟೆಂಡರ್ ಪ್ರಕ್ರಿಯೆ ನಡೆಯುತ್ತಿತ್ತು. ಇನ್ಮುಂದೆ ವಿಜಯಪುರ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಿ ನಡೆಸಲು ನಿರ್ಧರಿಸಲಾಗಿದೆ.
ಆನ್‌ಲೈನ್ ಟ್ರೇಡಿಂಗ್ ಎಂದಿನಂತೆ: ಆನ್‌ಲೈನ್ ಇ-ಟೆಂಡರ್ ವಹಿವಾಟಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿ ಮಂಗಳವಾರ ಹಾಗೂ ಶನಿವಾರದಂದು ನಡೆಯುವ ಆನ್‌ಲೈನ್ ಟ್ರೇಡಿಂಗ್ ಪ್ರಕ್ರಿಯೆಯು ಎಂದಿನಂತೆ ಎನ್ ಎಚ್ ಎಂ ಕಟ್ಟಡದಲ್ಲೇ ನಡೆಯಲಿದೆ.
ಇರೈತರಿಗೆ ತಮ್ಮ ಬೆಳೆಗಳಿಗೆ ಸೂಕ್ತ ಹಾಗೂ ಉತ್ತಮ ಬೆಲೆ ದೊರೆಯುವಂತೆ ಮಾಡಲು ಅಧಿಕೃತ ಲೈಸೆನ್ಸ್ ಹೊಂದಿರುವ ಎಲ್ಲ ಖರೀದಿದಾರರು ಹಾಗೂ ರೈತ ಬಾಂಧವರು ಈ ನೂತನ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡು ವ್ಯಾಪಾರ ವಹಿವಾಟಿನಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ವಿಜಯಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಕಟಣೆ ತಿಳಿಸಿದೆ.
