ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ದೇಶದ ಆರ್ಥಿಕ ಬೆಳವಣಿಗೆ, ಗ್ರಾಮೀಣ ಉದ್ಯೋಗ ಸೃಷ್ಠಿ ಮತ್ತು ಪೌಷ್ಠಿಕಾಂಶ ಭದ್ರತೆಗೆ ವಿಶೇಷ ಕೊಡುಗೆ ನೀಡುತ್ತಿರುವ ತೋಟಗಾರಿಕೆ ಅಭಿವೃದ್ಧಿಗೆ ಸರ್ಕಾರದ ಧನಾತ್ಮಕ ನೆರವಿರಲೆಂದು ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ, ಚಿಂತಕ ಅರವಿಂದ ಕೊಪ್ಪ ಹೇಳಿದರು.
ಪಟ್ಟಣದ ವಿದ್ಯಾನಗರದಲ್ಲಿರುವ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಕೇಂದ್ರ ಕಛೇರಿಯ ಸಭಾಂಗಣದಲ್ಲಿ ದಾಸೋಹಿ ರೈತ ಉತ್ಪಾದಕ ಸಹಕಾರಿ ಸಂಘ ಹಾಗೂ ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠ, ಬಸರಕೋಡ ಇವುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ತೋಟಗಾರಿಕೆ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಣ್ಣು, ತರಕಾರಿ, ಹೂವು ಹಾಗೂ ಔಷಧೀಯ ಸಸ್ಯಗಳ ಉತ್ಪಾದನಾ ತಾಂತ್ರಿಕತೆಗಳಿಂದ ವಿಸ್ತರಣೆ ಮತ್ತು ಉತ್ಪಾದನೆಯಲ್ಲಿ ಗಣನೀಯ ಏರಿಕೆ ಕಾಣುತ್ತಿರುವ ಮಧ್ಯೆ ಕಾಡುತ್ತಿರುವ ಮಾರುಕಟ್ಟೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಸಮಗ್ರ ನೀತಿಯ ಜಾರಿ ಇಂದಿನ ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ದಾಸೋಹಿ ಕುಕ್ಕುಟ ರೈತ ಉತ್ಪಾದಕ ಕಂಪನಿಯ ಉಪಾಧ್ಯಕ್ಷ ಜಿ.ಎಂ.ಯಡವಣ್ಣವರ ಮಾತನಾಡಿ ದೇಶದ ಕೃಷಿ ಜಿಡಿಪಿಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ತೋಟಗಾರಿಕೆಯ ಕ್ಷೇತ್ರ ವಿಸ್ತರಣೆ ಮತ್ತು ಅಭಿವೃದ್ಧಿಯಲ್ಲಿ ಡಾ. ಎಂ.ಎಚ್ ಮರಿಗೌಡರು ಮಾಡಿದ ಬಹುದೊಡ್ಡ ಕ್ರಾಂತಿಯ ಪ್ರತೀಕವಾಗಿ ಅವರ ಹೆಸರಿನಲ್ಲಿ ಈ ದಿನ ರಾಷ್ಟಿçÃಯ ತೋಟಗಾರಿಕೆ ದಿನಾಷರಣೆಯನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಣಕಾಸು ವಿಭಾಗದ ಉಪಾಧ್ಯಕ್ಷ ಆರ್.ಬಿ.ಸಜ್ಜನ ಮಾತನಾಡಿ ನಮ್ಮ ಭಾಗದಲ್ಲಿ ಸಾಂಪ್ರದಾಯಿಕ ತೋಟಗಾರಿಕೆ ಬೆಳೆ ಪ್ರದೇಶಗಳ ವಿಸ್ತರಣೆಗೆ ಹೋಲಿಸಿದಲ್ಲಿ ಪಾಲಿಹೌಸ್, ಹೈಡ್ರೋಪೋನಿಕ್ಸ ನಂತಹ ಆಧುನಿಕ ತೋಟಗಾರಿಕೆ ಅಳವಡಿಕೆಯಲ್ಲಿ ಕಂಡು ಬರುವ ಕೊರತೆ ನೀಗಿಸಲು ಉತ್ತರ ಕರ್ನಾಟಕವನ್ನು ವಿಶೇಷ ವಲಯವನ್ನಾಗಿ ಮಾಡಿ ಪ್ರೋತ್ಸಾದಾಯಕ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಕ್ರಮ ವಹಿಸಬೇಕು ಎಂದರು.
ನಿರ್ದೇಶಕರಾದ ಸೋಮನಗೌಡ ಬಿರಾದಾರ, ಶ್ರೀಶೈಲ ಮೇಟಿ, ಕಲ್ಲಣ್ಣ ಪ್ಯಾಟಿ, ರವೀಂದ್ರ ಕೋಳೂರ, ಪರಸಪ್ಪ ಮೇಟಿ, ಬಸವರಾಜ ಕುಂಟೋಜಿ, ನಿವೃತ್ತ ಶಿಕ್ಷಕ ರವೀಂದ್ರ ರೂಡಗಿ ಇದ್ದರು. ಹೃದಯಾನಂದ ಕೊಪ್ಪ ಸ್ವಾಗತಿಸಿದರು. ನ್ಯಾಯವಾದಿ ರಶ್ಮಿ ಕೊಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ಎಸ್.ಆರ್.ಸಜ್ಜನ ವಂದಿಸಿದರು.

