ಸಿಂದಗಿಯಲ್ಲಿ ನವರಾತ್ರಿ ವೈಭವ | ಮಹಿಳೆಯರ ದಾಂಡಿಯಾ ನೃತ್ಯೋತ್ಸವಕ್ಕೆ ಸಾಂಸ್ಕೃತಿಕ ಮೆರುಗು | ಖ್ಯಾತ ಚಲನಚಿತ್ರ ಸಾಹಿತಿ ಹಾಗೂ ಗೀತರಚನೆಕಾರ ಡಾ. ವಿ.ನಾಗೇಂದ್ರ ಪ್ರಸಾದ್ ಅಭಿಮತ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ನೃತ್ಯಕಲೆಗಳು ನಮ್ಮ ನಾಡಿನ ಅಮೂಲ್ಯ ಸಾಂಸ್ಕೃತಿಕ ಆಸ್ತಿಗಳಾಗಿವೆ. ನೈಜ ಕಲೆಯನ್ನು ಅನಾವರಣಗೊಳಿಸುವ ದಾಂಡಿಯಾ ನೃತ್ಯರೂಪಕಗಳು ನಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಗತವೈಭವವನ್ನು ಜೀವಂತವಾಗಿ ಬಿಂಬಿಸುತ್ತವೆ ಎಂದು ಖ್ಯಾತ ಚಲನಚಿತ್ರ ಸಾಹಿತಿ ಹಾಗೂ ಗೀತರಚನೆಕಾರ ಡಾ. ವಿ. ನಾಗೇಂದ್ರ ಪ್ರಸಾದ್ ಅಭಿಪ್ರಾಯಪಟ್ಟರು.
ನಗರದ ಮಾಂಗಲ್ಯ ಭವನದಲ್ಲಿ ಡ್ಯಾನಿ ಅಕಾಡೆಮಿ (ರಿ.) ಹಾಗೂ ಎಬಿಸಿಡಿ ಡ್ಯಾನ್ಸ್ ಕ್ಲಾಸ್ ವತಿಯಿಂದ ಅಕ್ಟೋಬರ್ 23ರಂದು ಆಯೋಜಿಸಿದ್ದ ‘ನವರಾತ್ರಿ ವೈಭವ–ದಾಂಡಿಯಾ ನೃತ್ಯೋತ್ಸವ 2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಬ್ಬಗಳ ತವರೂರಾದ ಭಾರತದಲ್ಲಿ ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ಐತಿಹಾಸಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವಿದೆ. ಹಬ್ಬಗಳು ಕೇವಲ ಆಚರಣೆಗಳಿಗೆ ಸೀಮಿತವಾಗದೆ ಮನುಷ್ಯ ಸಂಬಂಧಗಳನ್ನು ಬೆಸೆಯುವ, ಸಾಮರಸ್ಯ ಸಾರುವ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಸಾಂಸ್ಕೃತಿಕ ಸೇತುವೆಗಳಾಗಬೇಕು. ಆಧುನಿಕತೆಯ ಭರಾಟೆಯಲ್ಲಿ ನಮ್ಮ ಮೂಲ ಸಂಸ್ಕೃತಿಯ ಬೇರುಗಳು ಸಡಿಲಗೊಳ್ಳದಂತೆ ಎಚ್ಚರ ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ನಗರದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಪವಿತ್ರ ಅಕ್ಕನವರು, ಇನ್ನರ್ ವೀಲ್ ಕ್ಲಬ್ ಮಾಜಿ ಅಧ್ಯಕ್ಷೆ ನಾಗರತ್ನ ಮನಗೂಳಿ ಹಾಗೂ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾತನಾಡಿದರು.
ಗುತ್ತಿಗೆದಾರ ಮುತ್ತು ಎಂ. ಮುಂಡೇವಾಡಗಿ, ಭಾರತಿ ಹೊಸಮನಿ, ಡಾ. ಅಕ್ಷತಾ ಟಿ. ಗೋಟಗುಣಕಿ, ತಾರಾನಾಥ ರಾಠೋಡ, ಅಶೋಕ ಕೊಳಾರಿ, ಡಾ. ಅನಿಲ ನಾಯಕ, ಮಲ್ಲನಗೌಡ ಎ. ಪಾಟೀಲ, ಮುತ್ತು ಸೊನ್ನದ ಹಾಗೂ ಡ್ಯಾನಿ ಅಕಾಡೆಮಿ ಸಂಚಾಲಕ ಜ್ಞಾನೇಶ ಗುರವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಗೆಳೆಯರ ಬಳಗದ ಅಧ್ಯಕ್ಷ ರಾಜಶೇಖರ ಕೂಚಬಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸಿದ್ಧಲಿಂಗ ಚೌಧರಿ ಸ್ವಾಗತಿಸಿ, ನಿರೂಪಿಸಿದರು.
ಬಾಕ್ಸ್
ನೋಡುಗರ ಮನಸೂರೆಗೊಂಡ ದಾಂಡಿಯಾ ನೃತ್ಯಗಳು
ಬಣ್ಣಬಣ್ಣದ ಸಾಂಪ್ರದಾಯಿಕ ಉಡುಗೆಗಳಲ್ಲಿ ಮಹಿಳೆಯರು ಪ್ರದರ್ಶಿಸಿದ ದಾಂಡಿಯಾ ನೃತ್ಯಗಳು ನೋಡುಗರ ಮನಸೂರೆಗೊಂಡವು. ಸುಮಧುರ ಸಂಗೀತ, ಲಯಬದ್ಧ ಹೆಜ್ಜೆಗಳು ಹಾಗೂ ದಾಂಡಿಯಾ ಕೋಲುಗಳ ನಾದ ನವರಾತ್ರಿ ಸಂಭ್ರಮಕ್ಕೆ ವಿಶೇಷ ಮೆರುಗು ನೀಡಿದವು. ಮಹಿಳೆಯರ ಕಲಾತ್ಮಕ ಪ್ರತಿಭೆ ಮತ್ತು ಸಾಂಸ್ಕೃತಿಕ ಒಗ್ಗಟ್ಟಿಗೆ ಕಾರ್ಯಕ್ರಮ ಸಾಕ್ಷಿಯಾಯಿತು.

“ಮಹಿಳೆಯರು ದಾಂಡಿಯಾದಂತಹ ಸಾಂಪ್ರದಾಯಿಕ ನೃತ್ಯಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತಿರುವುದು ಹೆಮ್ಮೆಯ ಸಂಗತಿ. ಕಲೆ ಕೇವಲ ಮನರಂಜನೆಯ ಸಾಧನವಲ್ಲ; ಅದು ಬದುಕಿನ ಮೌಲ್ಯಗಳನ್ನು ಪ್ರತಿಪಾದಿಸುವ, ಸಮಾಜವನ್ನು ಒಗ್ಗೂಡಿಸುವ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಶಕ್ತಿಯುತ ಮಾಧ್ಯಮವಾಗಿದೆ.”
– ಡಾ. ವಿ.ನಾಗೇಂದ್ರ ಪ್ರಸಾದ್
ಖ್ಯಾತ ಚಲನಚಿತ್ರ ಸಾಹಿತಿ

