ಉತ್ತರ ವಲಯದಲ್ಲಿ ಜೂನ್ 21ರಿಂದ 28 ರವರೆಗೆ ಡ್ರಗ್ ಜಾಗೃತಿ ವಾರ | 16 ಪ್ರಕರಣ ದಾಖಲು
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ನಿಗ್ರಹ ದಿನದ ಅಂಗವಾಗಿ ಜೂನ್ 21ರಿಂದ 28ರವರೆಗೆ ಉತ್ತರ ವಲಯದಲ್ಲಿ “ಡ್ರಗ್ ಅವೇರ್‌ನೆಸ್ ವೀಕ್” ಆಚರಿಸಲಾಗಿದ್ದು, ವಿಶೇಷ ಕಾರ್ಯಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸುವ ಜೊತೆಗೆ, ಎನ್‌ಡಿಪಿಎಸ್ ಕಾಯ್ದೆಯಡಿ ವಿಶೇಷ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಕಾರ್ಯಾಚರಣೆಯ ಭಾಗವಾಗಿ, ಎನ್‌ಡಿಪಿಎಸ್ ಕಾಯ್ದೆಯಡಿ ವಶಪಡಿಸಿಕೊಂಡಿದ್ದ 427 ಕೆಜಿ 29 ಗ್ರಾಂ ತೂಕದ, ₹1,12,49,510 ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದೆ.
ಜೂನ್ 21ರಿಂದ 28ರವರೆಗೆ ಒಟ್ಟು 16 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ, 26 ಕೆಜಿ 987 ಗ್ರಾಂ ತೂಕದ, ₹12,38,788 ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದೇ ವೇಳೆ, ಮೊದಲ ಬಾರಿಗೆ PITNDPS ಕಾಯ್ದೆ ಅಡಿಯಲ್ಲಿ ಮಾದಕ ವಸ್ತುಗಳ ಸಂಗ್ರಹಣೆ, ಮಾರಾಟ ಹಾಗೂ ಸಾಗಾಟದಲ್ಲಿ ರೂಢಿಗತ ಆರೋಪಿಗಳೆಂದು ಗುರುತಿಸಲಾದ ನಾಲ್ವರನ್ನು ಬಂಧಿಸಲಾಗಿದೆ. ಬಂಧಿತರನ್ನು ನಾಗರಾಜ ದೊಡ್ಡಪ್ಪ ಮುತ್ತಗಾರ (ಗದಗ), ದೀಪಕ ರಾವಸಾಹೇಬ ನಾಯಿಕ (ಬೆಳಗಾವಿ), ಪ್ರಭು @ ಪ್ರಭಾಕರ ಬಾಬುರಾವ ಲಾವಟಿ (ಆಲಮೇಲ, ವಿಜಯಪುರ) ಹಾಗೂ ಮನೋಹರ @ ಮೋಹನ ಯಲ್ಲಪ್ಪ ಚವ್ಹಾಣ @ ಹರಣಶಿಕಾರಿ (ವಿಜಯಪುರ) ಎಂದು ಗುರುತಿಸಲಾಗಿದೆ.
ಇದಲ್ಲದೆ, ಉತ್ತರ ವಲಯದ ಐದು ಜಿಲ್ಲೆಗಳ ಶಾಲೆ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗಾಗಿ 1,106 ಜಾಗೃತಿ ಕಾರ್ಯಕ್ರಮಗಳು ಹಾಗೂ 107 ಸಾರ್ವಜನಿಕ ಜಾಗೃತಿ ರ್ಯಾಲಿಗಳನ್ನು ಆಯೋಜಿಸಿ, ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗಿದೆ.

