ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಮಣಂಕಲಗಿ ಗ್ರಾಮದಿಂದ ಅರ್ಜನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸಾರ್ವಜನಿಕ ರಸ್ತೆಯನ್ನು ಪಕ್ಕದ ಜಮೀನಿನ ಮಾಲೀಕರೊಬ್ಬರು ಬಂದ್ ಮಾಡಿರುವುದರಿಂದ ರೈತರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಸಮಸ್ಯೆಯನ್ನು ತಕ್ಷಣ ಬಗೆಹರಿಸಿ ರಸ್ತೆ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ಚಡಚಣ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.
ಗ್ರಾಮಗಳ ನಡುವಿನ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗ ಬಂದ್ ಆಗಿರುವ ಪರಿಣಾಮ ರೈತರು ತಮ್ಮ ಜಮೀನುಗಳಿಗೆ ಕೃಷಿ ಕಾರ್ಯಗಳಿಗಾಗಿ ತೆರಳಲು ಪರದಾಡುವಂತಾಗಿದೆ. ಅಲ್ಲದೆ ಪ್ರತಿದಿನ ಇದೇ ರಸ್ತೆಯನ್ನು ಬಳಸಿಕೊಂಡು ಶಾಲೆಗೆ ತೆರಳುವ ವಿದ್ಯಾರ್ಥಿಗಳು ಪರ್ಯಾಯ ಮಾರ್ಗ ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಮಯ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿರುವ ಈ ಸಂದರ್ಭದಲ್ಲಿ ರಸ್ತೆ ಬಂದ್ ಆಗಿರುವುದು ರೈತರಿಗೆ ಮತ್ತಷ್ಟು ಸಂಕಷ್ಟ ಉಂಟುಮಾಡಿದೆ. ಕೃಷಿ ಯಂತ್ರೋಪಕರಣಗಳು, ಬಿತ್ತನೆ ಸಾಮಗ್ರಿ ಹಾಗೂ ಇತರ ಅಗತ್ಯ ವಸ್ತುಗಳನ್ನು ಸಾಗಿಸಲು ತೊಂದರೆಯಾಗುತ್ತಿದ್ದು, ರಸ್ತೆ ಮುಚ್ಚಿರುವುದರಿಂದ ಗ್ರಾಮಸ್ಥರ ದೈನಂದಿನ ಜೀವನದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ.
ಮಣಂಕಲಗಿಯಿಂದ ಅರ್ಜನಾಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಾರ್ವಜನಿಕರು ಹಲವು ವರ್ಷಗಳಿಂದ ಬಳಸಿಕೊಂಡು ಬರುತ್ತಿದ್ದಾರೆ. ಧಿಡಿರ್ ರಸ್ತೆ ಬಂದ್ ಆಗಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣ ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಗಂಭೀರ ಅಡಚಣೆ ಉಂಟಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು. ಸಾರ್ವಜನಿಕರ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ತಹಶೀಲ್ದಾರರ ಪರವಾಗಿ ಮನವಿ ಸ್ವೀಕರಿಸಿ, ಸಂಬಂಧಿಸಿದ ಅಧಿಕಾರಿಗಳ ಮೂಲಕ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ವಿನಾಯಕ ಮಠಪತಿ, ಸಿದ್ದಾರಾಮ ಹೆಗಳೋಡಿ, ಅಶೋಕ ಜತ್ತಿ, ಸಿದ್ದರಾಮ ಮೇತ್ರಿ, ಪಂಡಿತ ಮೇತ್ರಿ, ಹಸನ ವಾಲಿಕಾರ, ದುಂಡಪ್ಪ ಜಿತ್ತಿ, ಶ್ರೀಶೈಲ ಮಠ, ಬಸವರಾಜ ಮೇತ್ರಿ ಸೇರಿದಂತೆ ಅನೇಕ ರೈತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

