ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್.
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಇವತ್ತಿನ ಮಾಹಿತಿ ಯುಗದಲ್ಲಿ ನಮಗೆ ಬೇಕಾದ ಬೇಡವಾದ ಹತ್ತು ಹಲವು ವಿಷಯಗಳು ನಮಗೆ ಮಾಹಿತಿಯ ರೂಪದಲ್ಲಿ ಲಭ್ಯವಾಗುತ್ತದೆ. ಈ ಹಿಂದೆ ಯಾವುದೇ ಹೊಸ ವಿಷಯವನ್ನು ನಮಗೆ ಪಾಲಕರು ಕಲಿಸುತ್ತಿದ್ದರು, ಪುಸ್ತಕಗಳ ಮೂಲಕ ವಿಷಯದ ಅರಿವಾಗುತ್ತಿತ್ತು ನಿಜ ಆದರೆ ಪುಸ್ತಕಗಳ ಲಭ್ಯತೆಯು ಕೂಡ ಅಷ್ಟೇ ಕಠಿಣವಾಗಿದ್ದು ಪುಸ್ತಕಗಳ ಮೂಲಕ ಮಸ್ತಕದ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂಬ ಅರಿವು ಬಹಳಷ್ಟು ಜನರಿಗೆ ಇರಲಿಲ್ಲ.
ಮೊಬೈಲ್ ನಲ್ಲಿಯೇ ಜಗತ್ತನ್ನು ಕಾಣುತ್ತಿರುವ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳನ್ನು ಹೇಗೆ ಬೆಳೆಸುವುದು ಎಂಬ ಕುರಿತು ಪಾಲಕರಿಗೆ ಅರಿವು ಮೂಡಿಸಬೇಕಾಗಿದ್ದು ಮಕ್ಕಳ ನಡವಳಿಕೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಪಾಲಕರ ನಡವಳಿಕೆ ಹೇಗಿರಬೇಕು ಎಂಬುದು ಒಂದು ಸವಾಲಿನ, ಗೋಜಲಿನ ಸಂಗತಿಯೇ ಆಗಿದೆ.
ಕೆಲ ದಶಕಗಳ ಹಿಂದೆ ಮಕ್ಕಳ ಮೇಲೆ ಪ್ರಭಾವ ಬೀರುವವರಲ್ಲಿ
ಮೊದಲು ಪಾಲಕರು ನಂತರ ಶಿಕ್ಷಕರು ಮೂರನೆಯದಾಗಿ ಸ್ನೇಹಿತರು ಮತ್ತು ಕೊನೆಯದಾಗಿ ಮಾಧ್ಯಮಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಮನೆಯಲ್ಲಿ ಪಾಲಕರು ಹೇಳಿದ ಮಾತೇ ಮೊದಲ ಮತ್ತು ಕೊನೆಯ ಮಾತಾಗಿರುತ್ತಿತ್ತು. ಪಾಲಕರು ಸೂಚಿಸಿದಂತೆಯೇ ಶಿಕ್ಷಕರು ಮಕ್ಕಳನ್ನು ಕಟ್ಟುನಿಟ್ಟಿನ ಶಿಸ್ತಿಗೊಳಪಡಿಸುತ್ತಿದ್ದರು. ಸ್ನೇಹಿತರ ಪ್ರಭಾವ ಅಷ್ಟೇನು ಇರುತ್ತಿರಲಿಲ್ಲ. ಅಂತಿಮವಾಗಿ ಮಾಧ್ಯಮಗಳು ಮಕ್ಕಳ ಮೇಲೆ ಪ್ರಭಾವ ಬೀರುತ್ತಿದ್ದವು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತಿರುವು ಮುರುವಾಗಿದ್ದು ಮಕ್ಕಳ ಮೇಲೆ ನಿಚ್ಚಳ ಪ್ರಭಾವವನ್ನು ಮಾಧ್ಯಮಗಳು ಬೀರುತ್ತಿದ್ದು ನಂತರದ ಸ್ಥಾನವನ್ನು ಕ್ರಮವಾಗಿ ಸ್ನೇಹಿತರು ಶಿಕ್ಷಕರು ಮತ್ತು ಕೊನೆಯ ಸ್ಥಾನವನ್ನು ಪಾಲಕರು ಪಡೆದುಕೊಂಡಿದ್ದಾರೆ ಎಂಬುದು ವಿಪರ್ಯಾಸದ ಸಂಗತಿ.

ಅಂದಿನ ಕೂಡು ಕುಟುಂಬಗಳಲ್ಲಿ ಮಕ್ಕಳು ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಕುಟುಂಬದ ಎಲ್ಲಾ ಆಗು ಹೋಗುಗಳಲ್ಲಿ ಮಕ್ಕಳ ಪಾತ್ರ ಅಧಿಕವಾಗಿತ್ತು. ತಂದೆಯಾದವನು ತನ್ನ ಮಕ್ಕಳನ್ನು ಕಟ್ಟುನಿಟ್ಟಾಗಿ ದಂಡಿಸಿದಾಗ ಆ ಮಗುವನ್ನು ಕೂಡು ಕುಟುಂಬದ ಬೇರೊಬ್ಬ ಸದಸ್ಯ ಕರೆದೊಯ್ದು ರಮಿಸಿ ಊಟ ಮಾಡಿಸಿ ನಿಧಾನವಾಗಿ ಆತನ ತಪ್ಪನ್ನು ಆತನಿಗೆ ಮನದಟ್ಟು ಮಾಡಿಸಿ,ಆತನ ತಂದೆ ಆತನ ಒಳಿತಿಗಾಗಿಯೇ ಗದರಿಸಿದ್ದು ಎಂದು ತಿಳಿ ಹೇಳುತ್ತಿದ್ದರು.
ಆದರೆ ಇದೀಗ ವಿಭಕ್ತ ಕುಟುಂಬದಲ್ಲಿ ತಂದೆ ತಾಯಿ ಮತ್ತು ಒಂದು ಇಲ್ಲವೇ ಎರಡು ಮಕ್ಕಳು ಇದ್ದು, ಮಗುವನ್ನು ಪಾಲಕರು ಗದರಿಸಿದಾಗ ಆ ಮಗುವನ್ನು ರಮಿಸಿ ಅದರ ಮನವೊಲಿಸಿ ತಪ್ಪು ತಿದ್ದುವವರ್ಯಾರು? ಮಗು ಯಾರನ್ನು ಅವಲಂಬಿಸಬೇಕು ಎಂಬುದೇ ಯಕ್ಷ ಪ್ರಶ್ನೆಯಾಗಿದೆ?
ಪಾಲಕರಿಂದ ಬೈಸಿಕೊಂಡ ಮಗು ತನ್ನ ಕೋಣೆಯಲ್ಲಿ ಹೋಗಿ ಕುಳಿತಾಗ ಆತ ತನ್ನ ಪಾಲಕರು ತನ್ನನ್ನು ನಿರ್ಲಕ್ಷಿಸುತ್ತಿದ್ದಾರೆ, ಕಾಳಜಿ ಮಾಡುವುದಿಲ್ಲ, ಅವರಿಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದೆಲ್ಲ ಭಾವಿಸಿ ಅದೇ ನಿಜ ಎಂಬಂತೆ ನಂಬುತ್ತಾನೆ.
ಮಗು ತನ್ನ ಮನದ ಭಾವನೆಗಳನ್ನು ಹಂಚಿಕೊಳ್ಳಲು ಯಾರಾದರೂ ಒಬ್ಬರು ಬೇಕಲ್ಲವೇ? ಯಾರೂ ಇಲ್ಲದೆ ಹೋದಾಗ ಮಗು ಮೊಬೈಲ್ನ ಮೊರೆ ಹೋಗುತ್ತದೆ. ಪಾಲಕರಿಗೆ ತನ್ನ ಅಸ್ತಿತ್ವದ ಗುರುತೇ ಇಲ್ಲ ಎಂದು ಭಾವಿಸುವ ಮಗುವಿನ ಅಸ್ತಿತ್ವವನ್ನು ಗುರುತಿಸುವ ಆಧುನಿಕ ತಂತ್ರಜ್ಞಾನದ ಪ್ರಭಾವಿ ಮಾಯಾ ಜಾಲವು ಮಗು ಬಯಸುವ ಎಲ್ಲವನ್ನೂ ತನ್ನಲ್ಲಿ ಆಡಗಿಸಿಕೊಂಡಿದ್ದು ಮಗುವಿನ ಎಲ್ಲ ಅವಶ್ಯಕತೆಗಳನ್ನು ಪೂರೈಸುವ ಮೂಲಕ ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದೆ.
ಇಂದಿನ ಆಧುನಿಕ ಯುಗದಲ್ಲಿ ಏನನ್ನಾದರೂ ಸಾಧಿಸುವ, ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪಾಲಕರು ವ್ಯಸ್ತರಾಗಿದ್ದು ಮಕ್ಕಳೆಡೆ ಗಮನ ಹರಿಸಲು ಅವರಿಗೂ ಸಾಧ್ಯವಾಗುತ್ತಿಲ್ಲ.
ಇತ್ತೀಚೆಗೆ ಅಟೆಂಶನ್ ಮ್ಯಾನೇಜರ್ ಎಂಬ ಹೊಸ ಹುದ್ದೆಯು ಸೃಷ್ಟಿಸಲ್ಪಟ್ಟಿದ್ದು, ಈ ನಿರ್ವಾಹಕನ ಕೆಲಸ ತನ್ನ ಗ್ರಾಹಕನ ಗಮನವನ್ನು ಅತ್ತಿತ್ತ ನೋಡದಂತೆ ಕೇವಲ ತನ್ನಲ್ಲಿ ಹಿಡಿದಿಟ್ಟುಕೊಳ್ಳುವುದು. ಈ ಹಿಂದೆ ಸಾಮಾಜಿಕ ಜಾಲತಾಣಗಳು ವಿವಿಧ ಫೋಟೋಗಳು, ವಿಡಿಯೋಗಳನ್ನು ಹೊಂದಿದ್ದು ಕ್ಲಿಕ್ ಮಾಡಿದೊಡನೆ ಆರಂಭವಾಗುತ್ತಿದ್ದ ಈ ವಿಡಿಯೋಗಳನ್ನು ಇದೀಗ ನಾವು ಅವುಗಳನ್ನು ವೀಕ್ಷಿಸಲು ನಮ್ಮ ಬೆರಳನ್ನು ಒತ್ತುವ ಮುನ್ನವೇ ಸ್ವಯಂಚಾಲಿತವಾಗಿ

ಪ್ರಸಾರವಾಗುತ್ತವೆ. ವ್ಯಕ್ತಿಯು ತನ್ನೆಲ್ಲ ಕೆಲಸ ಕಾರ್ಯಗಳನ್ನು ಹಿಂದಿಟ್ಟು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಕಾರಣ ನಾವು ಅವುಗಳ ಆಕರ್ಷಣೆಯಲ್ಲಿ ಸಿಲುಕಿಕೊಂಡಿರುವುದು.
ಸಾಮಾಜಿಕ ಜಾಲತಾಣಗಳು ವೈಜ್ಞಾನಿಕವಾಗಿ ಸಂಪೂರ್ಣವಾಗಿ ಮಕ್ಕಳ ಗಮನವನ್ನು ತಮ್ಮಲ್ಲಿ ಕೇಂದ್ರೀಕರಿಸಿಕೊಂಡಿವೆ. ಇಡೀ ದಿನ ಶಾಲೆಯಲ್ಲಿ ಕಳೆಯುವ ಮಕ್ಕಳು ತಮ್ಮೆಲ್ಲ ಅನುಭವಗಳನ್ನು ಹಂಚಿಕೊಳ್ಳಲು ಅತ್ಯುತ್ಸಾಹದಿಂದ ಮನೆಗೆ
ಬಂದಾಗ ಪಾಲಕರು ಆ ಮಕ್ಕಳನ್ನು ಕುರಿತು ಕೈಕಾಲು ಮುಖ ತೊಳೆ, ತಿಂಡಿ ತಿಂದು ಹಾಲು ಕುಡಿ, ಶಾಲೆಯ ಹೋಂವರ್ಕ್ ಮಾಡು ಎಂದು ಕಟುವಾಗಿ ಹೇಳುತ್ತಾರೆ. ಇದು ಮಕ್ಕಳ ಉತ್ಸಾಹ ಜರ್ರನೇ ಜರಿದು ಹೋಗಲು ಕಾರಣವಾಗುತ್ತದೆ.
ಮನೆಗೆ ಬರುವ ಮಕ್ಕಳನ್ನು ತಾಯಿ ಡಬ್ಬದಲ್ಲಿದ್ದುದನ್ನೆಲ್ಲ ಖಾಲಿ ಮಾಡಿದ್ದೀಯಾ ಎಂದು ಮೊದಲ ಪ್ರಶ್ನೆಯನ್ನು, ಶಾಲೆಯಲ್ಲಿ ಹೋಮ ವರ್ಕ್ ಏನು ಕೊಟ್ಟಿದ್ದಾರೆ ಎಂದು ಕೇವಲ ಎರಡು ಪ್ರಶ್ನೆಗಳನ್ನು ಕೇಳುತ್ತಾಳೆ.
ಇದರ ಬದಲಾಗಿ ತಾಯಿ ಮಕ್ಕಳು ಮನೆಗೆ ಬಂದೊಡನೆ ಅವರನ್ನು ಪ್ರೀತಿಯಿಂದ ತಬ್ಬಿ ಮುದ್ದಿಸಿ ಆ ದಿನ ಮಕ್ಕಳು ಶಾಲೆಯಲ್ಲಿ ಯಾವ ಹೊಸ ವಿಷಯಗಳನ್ನು ಕಲಿತರು, ಅವರು ಹೇಗಿದ್ದಾರೆ ಎಂದು ಕೇಳಬೇಕು. ಮಕ್ಕಳಿಗೆ ಟಾಸ್ಕ್ ಓರಿಯೆಂಟೆಡ್ ಆಗಿ ಏನೇನು ಮಾಡಬೇಕು ಎಂದು ಆದೇಶಿಸುವ ಬದಲು, ಫನ್ ಓರಿಯೆಂಟೆಡ್ ಆಗಿ ಮಕ್ಕಳ ಅವಶ್ಯಕತೆಗಳನ್ನು ಅರಿತು ಅದಕ್ಕೆ ಪೂರಕವಾಗಿ ವರ್ತಿಸಬೇಕು.
ಇಂದಿನ ಪಾಲಕರಿಗೆ ಬೇಕಾಗಿರುವುದು ಪುಸ್ತಕಗಳು, ಪಾಠಗಳು ಪರೀಕ್ಷೆಗಳು ಮತ್ತು ಫಲಿತಾಂಶ ಪಟ್ಟಿಗಳು. ಮಗುವಿನ ವ್ಯಕ್ತಿತ್ವ ನಿರ್ಮಾಣಕ್ಕಾಗಿ ಪಾಲಕರು ಏನನ್ನೂ ಮಾಡುತ್ತಿಲ್ಲ? ಎಂಬುದು ವಿಷಾದದ ಸಂಗತಿ. ಮಕ್ಕಳ ಕ್ರಿಯಾಶೀಲತೆಯನ್ನು ಬಡಿದೆಬ್ಬಿಸುವ ಶಿಕ್ಷಕರು ಕಡಿಮೆಯಾಗಿದ್ದು ಆ ಜಾಗದಲ್ಲಿ ಶಿಕ್ಷಕ ವೃತ್ತಿಯನ್ನು ನೌಕರಿ ಎಂದು ಭಾವಿಸುವ ಕೆಲಸಗಾರರು ಭರ್ತಿಯಾಗಿದ್ದಾರೆ. ದಿನಕ್ಕೆ ಇಂತಿಷ್ಟು ಗಂಟೆ ಮಾತ್ರವೇ ಕೆಲಸ ಮಾಡುತ್ತೇನೆ ಎಂದು ಸಮಯದ ಮಿತಿಯನ್ನು ಹಾಕಿಕೊಳ್ಳುವ ಕೆಲಸಗಾರರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ? ಈ ನಿಟ್ಟಿನಲ್ಲಿ ಪಾಲಕರು ಜಾಗರೂಕರಾಗಬೇಕಾದ ಅವಶ್ಯಕತೆ ಇದೆ.
ಇಲ್ಲಿ ಮುಖ್ಯವಾಗಿ ಕಾರ್ಯನಿರ್ವಹಿಸಬೇಕಾಗಿರುವುದು ಪಾಲಕರೇ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ತಾಯಿಯ ಗರ್ಭದಿಂದ ಹೊರಬರುವಾಗ ಮಗುವಿನ ಮೆದುಳು ಸುಮಾರು ಶೇಕಡ 25ರಷ್ಟು ಬೆಳೆದಿರುತ್ತದೆ. ಒಂದು ವರ್ಷದ ಹೊತ್ತಿಗೆ ಮತ್ತೆ ಐದರಿಂದ ಹತ್ತು ಶೇಕಡ ಮೆದುಳು ಬೆಳವಣಿಗೆಯಾಗಿದ್ದು ಸುಮಾರು 10 ವರ್ಷದ ಹೊತ್ತಿಗೆ ಶೇಕಡ 90ಕ್ಕಿಂತ ಹೆಚ್ಚು ಮಗುವಿನ ಮೆದುಳು ಬೆಳವಣಿಗೆಯನ್ನು ಹೊಂದುತ್ತದೆ. 16 ವರ್ಷದ ಹೊತ್ತಿಗೆ ಶೇಕಡ 100 ರಷ್ಟು ಬೆಳವಣಿಗೆಯನ್ನು ಕಾಣುತ್ತದೆ. ಆದ್ದರಿಂದ ಪಾಲಕರು ಮೊದಲ ಹತ್ತು ವರ್ಷದವರೆಗೆ ತಮ್ಮ ಹೆಚ್ಚಿನ ಸಮಯವನ್ನು ಮಕ್ಕಳಿಗೆ ಮತ್ತು ಅವರ ಬೆಳವಣಿಗೆಗೆ ಮೀಸಲಿಡಬೇಕು. ಒಳ್ಳೆಯ ಕೌಟುಂಬಿಕ ವಾತಾವರಣವನ್ನು ನಿರ್ಮಿಸಬೇಕು.

ಬದುಕಿನ ಅತಿ ಮುಖ್ಯ ಘಟ್ಟಗಳಾದ ಮದುವೆ ಮತ್ತು ಮಕ್ಕಳ ಕುರಿತು ನಾವು ಯಾವುದೇ ರೀತಿಯ ಔಪಚಾರಿಕ ಶಿಕ್ಷಣವನ್ನು ಹೊಂದಿಲ್ಲದೇ ಇರುವುದೇ ನಮ್ಮ ಇಂದಿನ ಎಲ್ಲ ವೈವಾಹಿಕ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಕಾರಣ ಎಂಬುದು ಸ್ಪಷ್ಟವಾಗಿದೆ.. ಇದರ ಜೊತೆಗೆ ಒಳ್ಳೆಯ ಶಿಕ್ಷಕರನ್ನು ನಿರ್ಮಾಣ ಮಾಡಬೇಕಾಗಿದೆ. ಪಾಲಕರು ಮತ್ತು ಶಿಕ್ಷಕರು ಸೇರಿ ಮಗುವನ್ನು ಒಳ್ಳೆಯ ನಾಗರಿಕರಾಗಿಸುವ ನಿಟ್ಟಿನಲ್ಲಿ ಬೆಳೆಸಬೇಕಾಗಿರುವುದು ಅವರಿಬ್ಬರ ಆಧ್ಯ ಕರ್ತವ್ಯವಾಗಿದ್ದು ಮಾಹಿತಿಗಳ ಜಾಲದಲ್ಲಿ ಮಗು ಸಿಲುಕಿಕೊಳ್ಳದಂತೆ ಅವರನ್ನು ಬೆಳೆಸುವುದು ಪಾಲಕರ
ಮುಂದಿರುವ ಮಹತ್ತರ ಜವಾಬ್ದಾರಿಯಾಗಿದೆ.
ಇನ್ನೂ ಹೇಳಬೇಕೆಂದರೆ ಇದೊಂದು ರೀತಿಯ ಮನಸ್ಸಿನ ಆಟ. ಮಕ್ಕಳು ತಮ್ಮ ಮನದ ಮಾತುಗಳನ್ನು ಕೇಳಲಿ ಎಂದು ಪಾಲಕರ ಗಮನವನ್ನು ಬಯಸುತ್ತದೆ.. ಆಗಮನವನ್ನು ಪಾಲಕರು ನೀಡದೆ ಹೋದಾಗ ಮಗುವಿನ ಆಸಕ್ತಿ ಮೊಬೈಲ್ ನೆಡೆಗೆ ತಿರುಗುತ್ತದೆ.
ಈ ಹಿಂದೆ ಶಾಲೆಗಳಲ್ಲಿ ಇರುತ್ತಿದ್ದ ಆಟದ ಅವಧಿಗಳು ಈಗ ಕಾಣ ಬರುವುದಿಲ್ಲ. ಆಟವಾಡುವ ಮಕ್ಕಳು ಸೋಲುವುದನ್ನು, ಗೆಲ್ಲುವುದನ್ನು ಏಳುವುದನ್ನು ಬೀಳುವುದನ್ನು ಹೊಂದಾಣಿಕೆಯ ಮನೋಭಾವವನ್ನು ಕಲಿಯುತ್ತಾರೆ. ಈ ಪಾಠಗಳು ಬದುಕಿಗೆ ಬಹು ಮುಖ್ಯವಾಗಿದ್ದು ಮಕ್ಕಳಿಗೆ ಪಾಠದ ಜೊತೆಗೆ ಆಟದ ಪಾಠವು ಅಷ್ಟೇ ಮುಖ್ಯವಾಗಿದ್ದು ಪಾಲಕರು ಮಕ್ಕಳೊಂದಿಗೆ ಆಟವಾಡುವ ಮೂಲಕ ಅವರೊಂದಿಗೆ ಹೆಚ್ಚು ಸಮಯ ಕಳೆಯಬೇಕು.. ಇದು ಮಗುವಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಅತ್ಯವಶ್ಯಕ.
ಮಕ್ಕಳಲ್ಲಿ ಗುರುತರ ಬದಲಾವಣೆಗಳನ್ನು ತರಲು ಪಾಲಕರು ಬದಲಾಗಬೇಕಾದ, ತಮ್ಮ ಜವಾಬ್ದಾರಿಗಳನ್ನು ಅರಿತು ಮಕ್ಕಳೊಂದಿಗೆ ಹೆಚ್ಚಿನ ಸಮಯ ಕಳೆಯುವುದರ ಮೂಲಕ
ಅವರಲ್ಲಿ ಮೌಲ್ಯಗಳನ್ನು ಬಿತ್ತಿ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಬೇಕಾದ ಗುರುತರ ಜವಾಬ್ದಾರಿ ಪಾಲಕರಲ್ಲಿ ಮೂಡಬೇಕಾಗಿದೆ.


