ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಸಂಭ್ರಮಾಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಎಷ್ಟು ಜನರು ಪ್ರಾಣ ತೆತ್ತಿದ್ದಾರೋ ಆ ಸ್ವಾತಂತ್ರವನ್ನು ಉಳಿಸಿಕೊಳ್ಳುವುದಕ್ಕಾಗಿ ವೀರ ಯೋಧರು ಸಹ ಪ್ರಾಣ ನೀಡಿದ್ದಾರೆ. ಈರ್ವರ ತ್ಯಾಗ ಹಾಗೂ ಬಲಿದಾನದ ಫಲವಾಗಿ ಇಂದು ಭಾರತದಲ್ಲಿ ನಾವೆಲ್ಲ ನೆಮ್ಮದಿಯಾಗಿ ಬದುಕುತ್ತಿದ್ದೇವೆ ಎಂದು ಭೂಸೇನೆಯ ನಿವೃತ್ತ ಸುಬೇದಾರ ಮೇಜರ್ ಗಿರಿಮಲ್ಲೇಶ ಬಿ.ಜಿ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ೮೦ ನೇ ಸ್ವಾತಂತ್ರೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಯುವಕರು ದೇಶದ ವಿಚಾರಕ್ಕೆ ಬಂದಾಗ ದೇಶವೇ ಮೊದಲು ಮಿಕ್ಕಿದ್ದೆಲ್ಲ ನಂತರ ಎನ್ನುವ ಮಟ್ಟದಲ್ಲಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜಗತ್ತಿನಲ್ಲಿಯೇ ಭಾರತ ಮತ್ತಷ್ಟು ಬಲಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತದೆ ಎಂದು ಹೇಳಿದರು.
ನಾನು ಸಹ ಹತ್ತಾರು ಆಪರೇಷನ್‌ಗಳಲ್ಲಿ ಭಾಗವಹಿಸಿ ಈ ದೇಶವನ್ನು ಕಾಯುವುದಕ್ಕಾಗಿ ಈ ದೇಶದ ಅಸ್ಮಿತೆಗಾಗಿ ಹೋರಾಟ ಮಾಡಿದ್ದು ಭಾರತ ದೇಶದಲ್ಲಿ ಜನಿಸಿದಕ್ಕೆ ಧನ್ಯವಾಯಿತು ಎನ್ನುವ ಭಾವ ನನ್ನಲ್ಲಿ ಮನೆ ಮಾಡಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಧ್ಯಾಪಕ ಡಾ.ಜಿ.ಪಿ ಸಾಳೆ ಮಾತನಾಡಿ, ಭಾರತ ಮತ್ತೊಮ್ಮೆ ವಿಶ್ವಗುರುವಾಗುವ ನಿಟ್ಟಿನಲ್ಲಿ ಹೆಜ್ಜೆ ಹಾಕುತ್ತಿದೆ. ವಿಕಸಿತ ಭಾರತದ ಕನಸನ್ನು ನನಸು ಮಾಡುವುದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಭಾರತ ಇನ್ನೂ ಎತ್ತರೆತ್ತರಕ್ಕೆ ಬೆಳೆಯುವುದಕ್ಕೆ ನಮ್ಮ ಯುವಶಕ್ತಿ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಅಗ್ನಿವೀರ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಭಾರತೀಯ ವಾಯು ಪಡೆಯ ಸೇವೆಗೆ ನಿಯೋಜನೆಗೊಂಡ ವಿದ್ಯಾರ್ಥಿನಿ ಐಶ್ವರ್ಯ ಮದಭಾವಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಪ್ರಾಂಶುಪಾಲ ಮಂಜುನಾಥ ಜುನಗೊಂಡ, ವಿದ್ಯಾರ್ಥಿಗಳಾದ ರಫೀಕ್ ಮೋರಟಿಗಿ, ಅಪೇಕ್ಷಾ ಹುಗ್ಗಿ, ಅಶ್ವಿನಿ ಮೋಟೇಕರ್ ಮಾತನಾಡಿದರು.
ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕಿಯರಾದ ಪುಷ್ಪಾ ಕೌಲಗಿ, ಶೈಕ್ಷಣಿಕ ಸಂಯೋಜಕ ಮಂಜುನಾಥ ತುಮ್ಮರಮಟ್ಟಿ ಉಪಸ್ಥಿತರಿದ್ದರು.
ವೈಶಾಲಿ ಪೂಜಾರಿ, ಸಿಂಧೂರಾಣಿ ಸ್ಥಾವರಮಠ ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ಶರಣಗೌಡ ಪಾಟೀಲ ಸ್ವಾಗತಿಸಿದರು, ಆಂಗ್ಲ ವಿಭಾಗದ ಮುಖ್ಯಸ್ಥೆ ಶ್ರದ್ಧಾ ಜಾಧವ ನಿರೂಪಿಸಿ ವಂದಿಸಿದರು.

