ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯ ಸರ್ಕಾರ 15,000 ಶಿಕ್ಷಕರ ನೇಮಕ ಮಾಡಿಕೊಳ್ಳುತ್ತಿದ್ದು, ಈ ಹುದ್ದೆಗಳಲ್ಲಿ ಒಂದು ಹುದ್ದೆಯೂ ಉರ್ದು ಮಾಧ್ಯಮದ ಹುದ್ದೆಗಳಿಗೆ ಪರಿಗಣಿಸಿರುವುದಿಲ್ಲ. ಇದರಿಂದಾಗಿ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಉರ್ದು ಮಾಧ್ಯಮದ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಗುಣಮಟ್ಟಕ್ಕೆ ಗಂಭೀರವಾದ ತೊಂದರೆ ಉಂಟಾಗುವ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ ಅವರಿಗೆ ಜಿಲ್ಲಾ ಉರ್ದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜುಬೇರ ಎಸ್.ಕೆರೂರ ಅವರು ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ಜುಬೇರ ಕೆರೂರ, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇವಲ ಕನ್ನಡ ಮತ್ತು ಆಂಗ್ಲ ಮಾಧ್ಯಮದ ವಿವಿಧ ವೃಂದದ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲು ಪರಿಗಣಿಸಲಾಗಿದೆ. ಜಿಲ್ಲೆಯಲ್ಲಿ ಬಹಳಷ್ಟು ಉರ್ದು ಮಾಧ್ಯಮದ ಶಾಲೆಗಳಲ್ಲಿ ಪಿ.ಎಸ್.ಟಿ, ಜಿ.ಪಿ.ಟಿ, ಎಚ್.ಎಸ್.ಟಿ, ಹಾಗೂ ಸಿ.ಎಸ್.ಟಿ ಶಿಕ್ಷಕರ ಕೊರತೆ ಇದ್ದು, ಆದರೆ ಸದರಿ ಸರ್ಕಾರಿ ಉರ್ದು ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇಮಕಾತಿಗಾಗಿ ಪರಿಗಣಿಸದೆ ಇರುವುದರಿಂದ, ಸರ್ಕಾರಿ ಶಾಲೆಗಳನ್ನೇ ನಂಬಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಗಣನೀಯವಾಗಿ ಕುಂಠಿತವಾಗುವ ಸಾಧ್ಯತೆಗಳು ಹೆಚ್ಚಿಸಿದೆ. ಅಲ್ಲದೆ ತಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರಿ ಉರ್ದು ಶಾಲೆಗಳನ್ನೇ ನಂಬಿರುವ ಪಾಲಕರು ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ಕಾರಿ ಉರ್ದು ಶಾಲೆಗಳ ಮೇಲೆ ಇಟ್ಟಿರುವ ನಂಬಿಕೆಯನ್ನು ಕಳೆದುಕೊಳ್ಳುವ ಸಾಧ್ಯತೆಗಳನ್ನು ಹೆಚ್ಚಿಸಿದೆ.
ಆದ್ದರಿಂದ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದ ಖಾಲಿ ಇರುವ ಸರ್ಕಾರಿ ಉರ್ದು ಪಿ.ಎಸ್.ಟಿ, ಜಿ.ಪಿ.ಟಿ,ಎಚ್.ಎಸ್.ಟಿ, ಹಾಗೂ ಸಿ.ಎಸ್.ಟಿ ಶಿಕ್ಷಕರ ಮಾಹಿತಿಯನ್ನು ಇಲಾಖೆಯಿಂದ ನಿಖರವಾಗಿ ಪಡೆದು ಈ ಅಧಿಸೂಚನೆಯಲ್ಲಿ ಅಗತ್ಯ ಮಾರ್ಪಡುಗಳನ್ನು ಮಾಡಿ ಉರ್ದು ಮಾಧ್ಯಮದ ಶಾಲೆಗಳಿಗೆ ಉರ್ದು ಶಿಕ್ಷಕರ ನೇಮಕಾತಿಗೆ ಅವಕಾಶವನ್ನು ಒದಗಿಸಿಕೊಡಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ, ಬಸೀರ್ ನದಾಪ್, ಜಮೀರ ನಾಗರಬಾವಿ, ಲತೀಪ್ ಇದ್ದರು.

