ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪತ್ನಿಯನ್ನು ಕೊಲೆಗೈದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಪ್ರಕರಣದಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣದ ವಿವರದಂತೆ, ವಿಜಯಪುರ ನಗರದ ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವಶಕ್ತಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ರಫೀಕ ತಂದೆ ಅಸ್ತಗೀರಸಾಬ ಬಳಗಾನೂರ ತನ್ನ ಪತ್ನಿ ಪರ್ವಿನ್ ಅವರ ಶೀಲದ ಬಗ್ಗೆ ಅನುಮಾನ ಪಟ್ಟು ನಿರಂತರವಾಗಿ ಕಿರುಕುಳ ನೀಡುತ್ತಿದ್ದ. ಈ ಕುರಿತು ಹಿರಿಯರು ಪಂಚಾಯಿತಿ ನಡೆಸಿ ಬುದ್ಧಿವಾದ ಹೇಳಿದ್ದರೂ, ಆತ ತನ್ನ ಪತ್ನಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಲಿಲ್ಲ.
2016ರ ಅಕ್ಟೋಬರ್ 17ರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 20ರ ಮಧ್ಯಾಹ್ನ 3 ಗಂಟೆಯ ನಡುವಿನ ಅವಧಿಯಲ್ಲಿ, ರಫೀಕ ತನ್ನ ಪತ್ನಿ ಪರ್ವಿನ್ ಅವರ ಕುತ್ತಿಗೆ, ಎದೆ, ಬೆನ್ನು ಹಾಗೂ ಭುಜದ ಭಾಗಗಳಿಗೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮನೆಯ ಬಾಗಿಲಿಗೆ ಬೀಗ ಹಾಕಿ ಪರಾರಿಯಾಗಿದ್ದನು.
ಈ ಸಂಬಂಧ ಜಲನಗರ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) ಕಲಂ 302 (ಕೊಲೆ) ಹಾಗೂ 201 (ಸಾಕ್ಷ್ಯ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ. ಅವರು ಅಭಿಯೋಗದ ಪರ ಮಂಡಿಸಲಾದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ, ಆರೋಪಿಯ ವಿರುದ್ಧದ ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿದರು. ಅದರಂತೆ ಆರೋಪಿ ರಫೀಕ ತಂದೆ ಅಸ್ತಗೀರಸಾಬ ಬಳಗಾನೂರನಿಗೆ ಜೀವಾವಧಿ ಶಿಕ್ಷೆ ಹಾಗೂ ₹1,00,000 ದಂಡ ವಿಧಿಸಿ, 2026ರ ಜೂನ್ 30ರಂದು ತೀರ್ಪು ಪ್ರಕಟಿಸಿದರು.
ಪ್ರಕರಣವನ್ನು ಅಂದಿನ ಪಿಎಸ್‌ಐ ಎನ್.ಎಸ್. ಜನಗೌಡ ದಾಖಲಿಸಿಕೊಂಡಿದ್ದರು. ತನಿಖೆಯನ್ನು ಸಿಪಿಐ ಬಸವರಾಜ ಯಲಗಾರ್ ಹಾಗೂ ಸುನೀಲ್ ಕಾಂಬಳೆ ನಡೆಸಿದ್ದರು. ನ್ಯಾಯಾಲಯದಲ್ಲಿ ಸಾಕ್ಷಿದಾರರನ್ನು ಹಾಜರುಪಡಿಸುವ ಕಾರ್ಯವನ್ನು ಹೆಡ್ ಕಾನ್ಸ್‌ಟೇಬಲ್ ಜೆ.ಪಿ. ಪವಾರ ನಿರ್ವಹಿಸಿದ್ದರು. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕ ಎಸ್.ಎಚ್. ಹಕೀಮ್ ವಾದ ಮಂಡಿಸಿದರು.
