ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಉಪನ್ಯಾಸಕರು ಪ್ರೌಢಶಾಲೆಯ ೯ಮತ್ತು೧೦ನೇ ತರಗತಿ ಮಕ್ಕಳಿಗೆ ಬೋಧಿಸುವುದು ಕಡ್ಡಾಯ ಎಂಬ ಹೊರಡಿಸಿದ ಆದೇಶದ ಹಿನ್ನಲೆಯಲ್ಲಿ ಅದನ್ನು ವಿರೋಧಿಸಿ ಸಿಂದಗಿ ತಾಲೂಕಾ ಉಪನ್ಯಾಸಕರ ಸಂಘದಿಂದ ಪಟ್ಟಣದಲ್ಲಿ ಸಿಂದಗಿ ಮತ್ತು ಆಲಮೇಲ ಸರ್ಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಆ ಆದೇಶವನ್ನು ಕೈಬಿಡಬೇಕು ಎಂಬ ಒತ್ತಾಯಿಸಿ ತಹಶೀಲ್ದಾರ ಕರೆಪ್ಪ ಬೆಳ್ಳಿ ಅವರಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗ ಕಿಣಗಿ ಮಾತನಾಡಿ, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ೯ಮತ್ತು೧೦ನೇ ತರಗತಿಗಳಿಗೆ ಕಡ್ಡಾಯವಾಗಿ ಬೋಧನೆ ಮಾಡುವ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲು ಮುಂದಾಗಿರುವುದು ಉಪನ್ಯಾಸಕರಲ್ಲಿ ತೀವ್ರ ಆತಂಕ ಹಾಗೂ ಅಸಮಾಧಾನಕ್ಕೆ ಕಾರಣವಾಗಿದೆ. ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸುವ ಉದ್ದೇಶ ಸ್ವಾಗತಾರ್ಹವಾದರೂ, ಅದರ ಪರಿಹಾರಕ್ಕಾಗಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಮೇಲೆ ಹೆಚ್ಚುವರಿ ಹೊಣೆಗಾರಿಕೆ ಹೊರಿಸುವುದು ವೈಜ್ಞಾನಿಕವೂ ಅಲ್ಲ, ನ್ಯಾಯಸಮ್ಮತವೂ ಅಲ್ಲ. ಇದರಿಂದ ಪದವಿಪೂರ್ವ ಶಿಕ್ಷಣದ ಗುಣಮಟ್ಟ ಕುಸಿಯುವ ಸಾಧ್ಯತೆ ಇದ್ದು, ನೇರ ನೇಮಕಾತಿ ಹಾಗೂ ಬಡ್ತಿ ಪಡೆದ ಸಾವಿರಾರು ಉಪನ್ಯಾಸಕರ ಸೇವಾ ಹಿತಾಸಕ್ತಿಗೂ ಧಕ್ಕೆಯಾಗಲಿದೆ. ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್. ವಿದ್ಯಾರ್ಹತೆ ಹೊಂದಿರುವ ಗೆಜೆಟೆಡ್-ಬಿ ಅಧಿಕಾರಿಗಳಾಗಿದ್ದು, ಅವರ ಸೇವಾ ನಿಯಮಗಳು, ವೇತನ ಶ್ರೇಣಿ ಹಾಗೂ ಆಡಳಿತಾತ್ಮಕ ಜವಾಬ್ದಾರಿಗಳು ಪ್ರೌಢಶಾಲಾ ಶಿಕ್ಷಕರಿಗಿಂತ ಭಿನ್ನವಾಗಿವೆ. ಇಂತಹ ಸಂದರ್ಭದಲ್ಲಿ ಪ್ರೌಢಶಾಲಾ ಹಂತದ ಬೋಧನೆಯನ್ನು ಕಡ್ಡಾಯಗೊಳಿಸುವುದು ಹುದ್ದೆಯ ಘನತೆಗೆ ಹಾಗೂ ಸೇವಾ ನಿಯಮಗಳಿಗೆ ವಿರುದ್ಧವಾಗುತ್ತದೆ.
ಈ ವೇಳೆ ಎಚ್.ಜಿ.ಕಾಲೇಜಿನ ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ ಮಾತನಾಡಿ, ಈ ಮಹತ್ವದ ತಿದ್ದುಪಡಿ ಕುರಿತು ಶಿಕ್ಷಣ ತಜ್ಞರು, ಉಪನ್ಯಾಸಕರ ಸಂಘಗಳು, ಶಿಕ್ಷಕರ ಪ್ರತಿನಿಧಿಗಳು ಹಾಗೂ ಸಂಬಂಧಿತ ವಿಧಾನ ಪರಿಷತ್ ಸದಸ್ಯರೊಂದಿಗೆ ಯಾವುದೇ ಸಮಾಲೋಚನೆ ನಡೆಸದೇ ಏಕಾಏಕಿ ನಿರ್ಧಾರ ಕೈಗೊಂಡಿರುವುದು ಸೂಕ್ತ ಕ್ರಮವಾಗಿಲ್ಲ. ಕರ್ನಾಟಕ ವಿಶೇಷ ರಾಜ್ಯ ಪತ್ರದ ಕರಡು ತಿದ್ದುಪಡಿಯನ್ನು ತಕ್ಷಣವೇ ಹಿಂಪಡೆಯಬೇಕು, ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ೯ಮತ್ತು೧೦ನೇ ತರಗತಿಗಳ ಬೋಧನೆಯನ್ನು ಕಡ್ಡಾಯಗೊಳಿಸುವ ಪ್ರಸ್ತಾವನೆಯನ್ನು ಕೈಬಿಡಬೇಕು, ಶಿಕ್ಷಣ ತಜ್ಞರು, ಉಪನ್ಯಾಸಕರ ಸಂಘಗಳು ಹಾಗೂ ಸಂಬಂಧಿತ ಎಲ್ಲಾ ಹಿತಾಸಕ್ತಿದಾರರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ನಿವಾರಿಸಲು ಖಾಲಿ ಹುದ್ದೆಗಳನ್ನು ಶೀಘ್ರದಲ್ಲಿ ಭರ್ತಿ ಮಾಡುವ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಬೇಡಿಕೆಯನ್ನಿಟ್ಟಿದ್ದಾರೆ.
ಈ ವೇಳೆ ವಿವಿಧ ಕಾಲೇಜುಗಳ ಉಪನ್ಯಾಸಕರುಗಳಾದ ಬಿ.ಎಮ್.ಸಿಂಗನಳ್ಳಿ, ಎನ್.ಬಿ.ಪೂಜಾರಿ, ಎಫ್.ಎ.ಹಾಲಪ್ಪನವರ, ಪ್ರಸನ್ನಜೋಗೂರ, ಎಸ್.ಎಸ್.ತಾಳಿಕೋಟಿ, ಎಸ್.ಎಚ್.ಮಡಿವಾಳರ, ಡಾ.ಶರಣಬಸವ ಜೋಗೂರ, ಜಿ.ಎಮ್.ಹೈಯಾಳಕರ, ಎಮ್.ಎನ್.ಅಜ್ಜಪ್ಪ, ಎಸ್.ಜಿ.ಪಾಟೀಲ,, ಸತೀಶ ಬಸರಕೋಡ, ಆರ್.ಎಮ್.ನಾರಾಯಣಕರ, ಗವಿಸಿದ್ದಪ್ಪ ಆನೆಗುಂದಿ, ಪಿ.ವ್ಹಿ.ಮಹಲಿನಮಠ, ಬಿ.ಬಿ.ಜಮಾದಾರ, ಡಾ.ಪ್ರಮೋದಕಟ್ಟಿ, ಎಮ್.ಬಿ,ಕಲಶೆಟ್ಟಿ ಸೇರಿದಂತೆ ಅನೇಕರು ಇದ್ದರು.

