ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಚುನಾವಣೆಗಳೇ ಪ್ರಜಾಪ್ರಭುತ್ವದ ಜೀವಾಳವಾಗಿದ್ದು ಮಕ್ಕಳು ಶಾಲಾ ಹಂತದಲ್ಲಿಯೇ ಮತದಾನದ ಮಹತ್ವದ ಕುರಿತು ಅರಿಯಬೇಕು. ಚುನಾವಣೆಯ ಪ್ರಕ್ರಿಯೆಗಳನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಸಂವಿಧಾನದ ಆಶಯವನ್ನು ಅಳವಡಿಸಿಕೊಳ್ಳಬೇಕು ಎಂದು ಮತದಾರ ಸಾಕ್ಷರತಾ ಸಂಘದ ಸಂಚಾಲಕರಾದ ಶಿಕ್ಷಕಿ ಸವಿತಾ ಬೆನಕಟ್ಟಿ ಹೇಳಿದರು.
ಅವರು ಕುಂಬಾರಹಳ್ಳ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಸಂಸತ್ತ ಚುನಾವಣೆಯ ಸಂಚಾಲತ್ವವಹಿಸಿ ಮಾತನಾಡಿ, ಭಾರತ ಜಗತ್ತಿನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದಾರೆ. ಮತಗಳೇ ಪ್ರಭುತ್ವವನ್ನು ನಿರ್ಧರಿಸುತ್ತವೆ. ಮುಂದಿನ ಪ್ರಜೆಗಳಾದ ಮಕ್ಕಳು ವಿದ್ಯಾರ್ಥಿದೆಸೆಯಿಂದಲೆ ಪವಿತ್ರ ಮತದಾನದ ಮಹತ್ವ ಅರಿಯುವಂತಾಗಲು ಶಾಲಾ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದರು.
ಸಾರ್ವತ್ರಿಕ ಚುನಾವಣೆಗಳು ನಡೆಯುವ ಮಾದರಿಯಲ್ಲಿಯೇ ಮತಪೆಟ್ಟಿಗೆಗಳನ್ನು ಬಳಸಿ ಮಕ್ಕಳಿಂದ ಮತದಾನ ಮಾಡಿಸಲಾಯಿತು. ಮತದಾನದ ಪ್ರಾತ್ಯಕ್ಷಿಕೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ನಿಂಗಪ್ಪ ತೇರದಾಳ, ಸದಸ್ಯರಾದ ಪದ್ಮಾ ಹುದಲಿ, ಶೈಲಾ ಮಾಳಿ, ಅಪ್ಪಸಾಬ್ ನದಾಫ್ ಉಪಸ್ಥಿತರಿದ್ದು ಚುನಾವಣೆಗೆ ಚಾಲನೆ ನೀಡಿದರು.
ಮಕ್ಕಳು ಅತ್ಯಂತ ಸಂತಸದಿಂದ ತಮ್ಮ ಹಕ್ಕನ್ನು ಚಲಾಯಿಸಿದರು. ಚುನಾವಣೆಯ ನಂತರ ಮತಗಳನ್ನು ಎಣಿಕೆ ಮಾಡಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಮಕ್ಕಳೇ ಮತಗಟ್ಟೆ ಅಧಿಕಾರಿಗಳಾಗಿ, ಪೋಲಿಂಗ ಆಫೀಸರ್ ಆಗಿ, ಪೊಲೀಸ್ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದರು.
ಮುಖ್ಯಶಿಕ್ಷಕ ನಾರಾಯಣ ಶಾಸ್ತ್ರಿ ಫಲಿತಾಂಶ ಘೋಷಿಸಿ *ಚುನಾವಣೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆ ಮುಖ್ಯ .ಭಾರತದ ಭಾಗ್ಯವಿಧಾತರಾದ ನೀವೆಲ್ಲರೂ ಉತ್ತಮಪ್ರಜೆಗಳಾಗಿ ದೇಶಸೇವೆಯನ್ನು ಮಾಡಿ ಸಮಾಜದ ಋಣ ತೀರಿಸಬೇಕು ಎಂದರು.
ಶಿಕ್ಷಕರಾದ ಸಂಗಮೇಶ ಉಟಗಿ, ಚಂದ್ರಕಾಂತ ಪೋಲಿಸ್, ಅಶೋಕ ಬಿರಾದಾರ ಪಾಟೀಲ, ಶಾರದಾ ಮತ ಎಣಿಕೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ಶಿಕ್ಷಕರಾದ ಬಾಹುಬಲಿ ಮುತ್ತೂರ, ಮಂಜುಳಾ ಕಡಕೋಳ, ಆಸೀಫಾಭಾನು ಮೊಮಿನ್,ಶಕುಂತಲಾ ಬಿರಾದಾರ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ತರಬೇತಿ ನೀಡಿದರು.
ನಡೆದಂಥ ಚುನಾವಣೆಯಲ್ಲಿ ಶ್ರವಣ ಯಮನಪ್ಪ ತೇಲಿ 95, ಶ್ರವಣ ಅಡೆವಪ್ಪ ಇಂಡಿ 93, ಚೈತ್ರಾ ನಿಂಗಪ್ಪ ತೇರದಾಳ 88, ಪೂರ್ಣಿಮಾ ಲಕ್ಷ್ಮಣ ಜೋಗಪ್ಪಗೋಳ 88, ಭವಾನಿ ಸದಾಶಿವ ಮಾಳಿ 82, ಶ್ವೇತಾ ಹಣಮಂತ ನ್ಯಾಮಗೌಡ 80, ಮಾದೇವ ಅಮೋಘಿ ಕುರಣಿ 78, ಸಾತ್ವಿಕ ಸಿದ್ಧಪ್ಪ ನರಸನ್ನವರ 77, ಸಂಜು ಬಸಪ್ಪ ಮಾಂಗ 71,ಮಂಜುನಾಥ ಸಾಬು ನಾಟಿಕಾರ 70 ಅತ್ಯಧಿಕ ಮತ ಪಡೆದು 2026-27ನೆಯ ಶಾಲಾ ಸಂಸತ್ತಿಗೆ ಆಯ್ಕೆಯಾದರು. ಒಟ್ಟು ಚಲಾವಣೆಯಾದ ಮತಗಳು 206. ತಿರಸ್ಕೃತಗೊಂಡ ಮತಗಳು 02.
ಶಿಕ್ಷಕ ಸಂಗಮೇಶ ಉಟಗಿ ಸ್ವಾಗತಿಸಿದರು, ಚಿತ್ರಕಲಾ ಶಿಕ್ಷಕ ಚಂದ್ರಕಾಂತ ಪೋಲೀಸ್ ವಂದಿಸಿದರು. ಶಿಕ್ಷಕಿ ಮೋಮಿನ್ ಅವರು ನಿರೂಪಿಸಿದರು.

