ಮುದ್ದೇಬಿಹಾಳದಲ್ಲಿ ೧೨ ಪ್ರಕರಣ ದಾಖಲು | ರೂ.೨,೩೦೦ ದಂಡ ವಸೂಲಿ
ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಂಬಾಕು ನಿಯಂತ್ರಣಕ್ಕೆ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ತಂಬಾಕು ನಿಯಂತ್ರಣ ಕೋಶ ಹಾಗೂ ತಾಲೂಕು ತಂಬಾಕು ತನಿಖಾ ದಳದ ಸದಸ್ಯರು ಕೊಟ್ಟಾ ಕಾಯ್ದೆಯಡಿ ವಿಶೇಷ ದಾಳಿ ನಡೆಸಿ, ನಿಯಮ ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ಧ ೧೨ ಪ್ರಕರಣಗಳನ್ನು ದಾಖಲಿಸಿ ಒಟ್ಟು ₹೨,೩೦೦ ದಂಡ ವಸೂಲಿ ಮಾಡಿದ್ದಾರೆ.
ಗ್ರಾಮದ ಮುಖ್ಯರಸ್ತೆಯಿಂದ ಬಸವೇಶ್ವರ ದೇವಸ್ಥಾನದವರೆಗೆ ಹಾಗೂ ಮುದ್ದೇಬಿಹಾಳ ರಸ್ತೆಯಲ್ಲಿರುವ ಚಹಾ ಅಂಗಡಿಗಳು ಸೇರಿದಂತೆ ವಿವಿಧ ವ್ಯಾಪಾರ ಮಳಿಗೆಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ದಾಳಿಯ ವೇಳೆ ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಿ, ಅಂಗಡಿ ಮಾಲೀಕರು ಹಾಗೂ ವ್ಯಾಪಾರಸ್ಥರಿಗೆ ಕೊಟ್ಟಾ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ಸಹ ನೀಡಿದ್ದಾರೆ.
ಈ ವೇಳೆ ಕಾಯ್ದೆಯ ಸೆಕ್ಷನ್ ೪ ಹಾಗೂ ೬(ಎ) ಅನ್ವಯ ಕಡ್ಡಾಯವಾಗಿ ಅಳವಡಿಸಬೇಕಾದ ಎಚ್ಚರಿಕೆ ನಾಮಫಲಕಗಳನ್ನು ಅಳವಡಿಸಿ, ಅನಧಿಕೃತ ತಂಬಾಕು ಜಾಹೀರಾತು ಫಲಕಗಳನ್ನು ತೆರವುಗೊಳಿಸಿದ್ದಾರೆ. ಆರೋಗ್ಯ ಇಲಾಖೆ ಗ್ರಾಮದಲ್ಲಿ ಏಕಕಾಲಕ್ಕೆ ವಿವಿಧ ಸ್ಥಳಗಳಲ್ಲಿ ಪರಿಶೀಲನೆ ನಡೆಸಿ, ನಿಯಮಗಳ ಉಲ್ಲಂಘನೆ ಕಂಡುಬಂದ ಕಡೆಗಳಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಗರಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮೇಲ್ವಿಚಾರಕ ಎಂ.ಎಸ್. ಗೌಡರ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಬಿ. ಹೂಗಾರ, ಕುಂಟೋಜಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗಿರೀಶ ಬಿರಾದಾರ, ಆಶಾ ಕಾರ್ಯಕರ್ತೆಯರಾದ ಯಲ್ಲಮ್ಮ ಹೊಸಮನಿ ಹಾಗೂ ರೇಣುಕಾ ತಾಂಬ್ರಳ್ಳಿ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.
