ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಪಟ್ಟಣದ ಇಂದಿರಾನಗರದ ಸರ್ವೇ ನಂ. ೫೯ರಲ್ಲಿ ನಿರ್ಮಿಸಲಾಗಿರುವ ಚರಂಡಿಯನ್ನು ತಕ್ಷಣ ಸ್ವಚ್ಛಗೊಳಿಸಿ, ಅನಧಿಕೃತವಾಗಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಮುಖಂಡ ಮಹಿಬೂಬ ಅವಟಿ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರಿಗೆ ಮನವಿ ಸಲ್ಲಿಸಿದರು.
ಈ ಹಿಂದೆ ಸಾರ್ವಜನಿಕರು ನಡೆಸಿದ್ದ ಧರಣಿಯ ನಂತರ ಪುರಸಭೆ ಅಧಿಕಾರಿಗಳು ಸ್ಪಂದಿಸಿ ಕೆಲವು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ್ದಕ್ಕಾಗಿ ಅಭಿನಂದನೆ ಸಲ್ಲಿಸಿದ ನಿವಾಸಿಗಳು ತೆರವುಗೊಳಿಸಿದ ಕಟ್ಟಡಗಳ ಅವಶೇಷಗಳನ್ನು ಇನ್ನೂ ಸ್ಥಳದಿಂದ ತೆರವುಗೊಳಿಸದ ಕಾರಣ ಸಾರ್ವಜನಿಕರ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿದರು.
ಇದಲ್ಲದೆ, ಚರಂಡಿಯಲ್ಲಿ ಕೊಳಚೆ ನೀರು ನಿಂತು ದುರ್ವಾಸನೆ ಹರಡುತ್ತಿದ್ದು, ಸೊಳ್ಳೆಗಳ ಕಾಟ ಹೆಚ್ಚಾಗಿ ಸುತ್ತಮುತ್ತಲಿನ ನಿವಾಸಿಗಳ ಆರೋಗ್ಯಕ್ಕೂ ಅಪಾಯ ಉಂಟಾಗುತ್ತಿದೆ ಕೂಡಲೇ ಚರಂಡಿಯನ್ನು ಸ್ವಚ್ಛಗೊಳಿಸಿ, ಕೊಳಚೆ ನೀರು ಸರಾಗವಾಗಿ ಹರಿಯುವಂತೆ ಅಗತ್ಯ ಕಾಮಗಾರಿ ಕೈಗೊಳ್ಳುವ ಮೂಲಕ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಮತ್ತು ಸರ್ವೇ ನಂ. ೫೯ರಲ್ಲಿ ನಿರ್ಮಾಣವಾಗಿರುವ ಎಲ್ಲಾ ಅನಧಿಕೃತ ಕಟ್ಟಡಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಶರಣು ಹೊಳಿ, ರೇಣುಕಾ ವಾಲಿಕಾರ, ಇಮಾಂಬಿ ವಾಲಿಕಾರ, ಬಂದೇನವಾಜ್ ಮುಲ್ಲಾ, ಅಬ್ರಾರ್ ಮುಲ್ಲಾ, ಅಬ್ದುಲ್ ಜಬ್ಬಾರ್ ಗೋಲಂದಾಜ್, ಬಾಬಾ ಮುಲ್ಲಾ ಸೇರಿದಂತೆ ಮತ್ತೀತರರು ಇದ್ದರು.

