ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಾತ್ವಿಕ ರಾಜಕಾರಣಕ್ಕೆ ಉದಾಹರಣೆಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿ ಅವರ ತೇಜೋವಧೆ ಮಾಡಬೇಡಿ ಎಂದು ಬಿಜೆಪಿ ಓಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಡಬ್ಬಿ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಕಾ, ಬಾಬಾ, ಅಣ್ಣ ಎಂದು ಸಾತ್ವಿಕತನದಿಂದ ಕೂಡಿದ ಮಾತುಗಳನ್ನಾಡುವ ಸಂಸದ ರಮೇಶ ಜಿಗಜಿಣಗಿ ಲಕ್ಷ ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಜಿಲ್ಲೆಗೆ ತಂದಿರುವ ಕೀರ್ತಿ ಸಂಸದ ರಮೇಶ ಜಿಗಜಿಣಗಿ ಅವರಿಗೆ ಸಲ್ಲುತ್ತದೆ, ಈ ಹಿಂದಿನ ಸಂಸದರು ಮಾಡಿದ ಕಾರ್ಯವೈಖರಿ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರ ಕಾಲಘಟ್ಟದಲ್ಲಿ ಕೈಗೊಂಡ ಕಾಮಗಾರಿಗಳನ್ನು ತುಲನೆ ಮಾಡಿ ನೋಡಿ, ಸಂಸದ ರಮೇಶ ಜಿಗಜಿಣಗಿ ಅವರು ಸಂಸದರಾಗಿದ್ದ ಅವಧಿಯಲ್ಲಿ ರೈಲ್ವೇ ಓವರ್ ಬ್ರಿಡ್ಜ್, ವಿಮಾನ ನಿಲ್ದಾಣ, ಬಹುಹಳ್ಳಿ ಕುಡಿಯುವ ನೀರು, ವಿಜಯಪುರ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಹೀಗೆ ಅವರ ಸಾಧನೆ ಹೇಳಲು ದಿನಗಳೇ ಬೇಕು ಎಂದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಡಾ.ಸುಧಾಮೂರ್ತಿ ಅವರನ್ನು ಸಿಂಪಲ್ ಸುಧಾಮೂರ್ತಿ ಎಂದು ಪದೇ ಪದೇ ಅವಹೇಳನ ಮಾಡುವ ಮನಸ್ಥಿತಿಯಿಂದ ದೂರ ಬರಬೇಕು. ನಿಮ್ಮ ಪಕ್ಕದಲ್ಲಿಯೇ ಇರುವ ನಿಮ್ಮ ಮುಖ್ಯಮಂತ್ರಿಗಳೇ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದದ್ದು ನೀವು ಮರೆತಿದ್ದೀರಾ ಎಂದು ಪ್ರಶ್ನಿಸಿದರು.
ಜಾತಿ ಜನಗಣತಿಯ ವರದಿಯನ್ನು ನಿಕಟಪೂರ್ವ ಮುಖ್ಯಮಂತ್ರಿಗಳು ತರಾತುರಿಯಲ್ಲಿ ಸಹಿ ಮಾಡಿದ್ದರೆ ಆ ಅನ್ಯಾಯದ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ, ಸಚಿವರ ಸಂಬಂಧಿಕರ ಮನೆಯಲ್ಲಿಯೇ ಲೋಕಾಯುಕ್ತರು ದಾಳಿ ಮಾಡುವಂತಾಗಿದೆ, ಮೊದಲು ತಮ್ಮ ಮನೆಯನ್ನು ಸಚಿವರು ಶುದ್ಧೀಕರಿಸಿಕೊಳ್ಳಿ ನಂತರ ಇನ್ನೊಬ್ಬರ ಬಗ್ಗೆ ಮಾತನಾಡಿ ಎಂದರು.
ಪದ್ಮಶ್ರೀ ಪ್ರಶಸ್ತಿಗಳು ಮೊದಲು ಕೆಲವರಿಗೆ ಮಾತ್ರ ಸೀಮಿತವಾಗಿದ್ದು, ಆದರೆ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಎಲೆಮರೆಯ ಕಾಯಿಯಂತೆ ಇರುವ ಸಾಧಕರನ್ನು ಗುರುತಿಸಿ, ಯಾರಿಗೆ ಪದ್ಮಶ್ರೀ ಪ್ರಶಸ್ತಿ ಇದೆ ಎಂಬುದು ಗೊತ್ತಿಲ್ಲದ ನಿಸ್ವಾರ್ಥ ಸಾಧಕರನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದರು.
ಬಿಜೆಪಿ ಮುಖಂಡರಾದ ಈರಣ್ಣ ರಾವೂರ, ಮಳುಗೌಡ ಪಾಟೀಲ, ಸಿದ್ದು ಬುಳ್ಳಾ, ಮಂಜುನಾಥ ಮೀಸೆ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಸಂಘಟನೆಗಳು ಕಾಂಗ್ರೆಸ್ ವಿರುದ್ಧ ಸಿಡಿದೇಳಲಿ
ಮುಖಂಡರಾದ ರವಿ ವಗ್ಗೆ ಮಾತನಾಡಿ, ಎಸ್‌ಇಪಿ-ಟಿಎಸ್‌ಪಿ ಹಣವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿ – ಪರಿಶಿಷ್ಟ ಸಮುದಾಯಗಳಿಗೆ ಮಾಡಿದ ಘೋರ ಅನ್ಯಾಯ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಚುನಾವಣೆ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿರುವುದು ಪರಿಶಿಷ್ಟ ಪಂಗಡಗಳಿಗೆ ಮಾಡಿದ ಘೋರ ಅನ್ಯಾಯ, ಈ ಮೊಂಡು ಸರ್ಕಾರ ಈ ಹಣವನ್ನು ವಾಪಾಸ್ಸು ನೈಜ ಉದ್ದೇಶಕ್ಕೆ ಬಳಸಿಕೊಳ್ಳುವ ಕೆಲಸ ಮಾಡಲಿಲ್ಲ ಎಂದರು.
ಇಷ್ಟೆಲ್ಲಾ ದೊಡ್ಡ ಅನ್ಯಾಯದ ವಿರುದ್ಧ ದಲಿತ ಸಂಘಟನೆಗಳು ಪ್ರಬಲ ಧ್ವನಿ ಎತ್ತಬೇಕು, ಅವರು ಏನೂ ಮಾಡಿಕೊಳ್ಳಲು ಸಾಧ್ಯವಿಲ್ಲ, ಸಂಘಟನೆಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಿಡಿದೇಳಬೇಕು ಎಂದು ಒತ್ತಾಯಿಸಿದರು.
ಸಂಸದ ರಮೇಶ ಜಿಗಜಿಣಗಿ ಅವರ ದೂರದೃಷ್ಟಿಯ ಗಂಗಾ ಕಲ್ಯಾಣ ಯೋಜನೆ ಜಾರಿಗೆ ಅನೇಕ ತೊಂದರೆ ಅನುಭವಿಸಿದ್ದಾರೆ, ಅನೇಕ ವೈರುಧ್ಯಗಳ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಯಾಗಲು ಅಂದಿನ ಸರ್ಕಾರ ಒಪ್ಪದೇ ಹೋದಾಗ ರಾಜಿನಾಮೆ ನೀಡಲು ಮುಂದಾಗಿದ್ದರು, ಕೊನೆಗೆ ಸರ್ಕಾರ ಅವರ ಹೋರಾಟಕ್ಕೆ ಮಣಿದು ಈ ಯೋಜನೆಗೆ ಅಸ್ತು ಎಂದಿತು ಎಂದರು.

