ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಜಾಲವಾದ ಸಹಿತ ಬೂದಿಹಾಳ ಡೋಣ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನ ವ್ಯತ್ಯಾಸದಿಂದಾಗಿ ಟಿ.ಸಿ ಹಾಗೂ ರೈತರ ಪಂಪಸೆಟ್, ಮೋಟಾರ್‌ಗಳಿಗೆ ಹಾನಿಯಾಗುತ್ತಿದ್ದು ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿ ರಾಷ್ಟ್ರೀಯ ರೈತಸಂಘದ ಸದಸ್ಯರು ಹೆಸ್ಕಾಂ ಎಇಇ ಸತೀಶ ಸುಲಾಖೆ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಹೆಸ್ಕಾಂ ಕಚೇರಿಗೆ ಗುರುವಾರ ಆಗಮಿಸಿದ ರೈತರು ವಿದ್ಯುತ್ ಅಸಮರ್ಪಕ ಸರಬರಾಜಿನ ಕುರಿತು ಹೆಸ್ಕಾಂ ಸಿಬ್ಬಂದಿಯ ಗಮನ ಸೆಳೆದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ರೈತಸಂಘದ ರಾಜ್ಯ ಮಹಿಳಾ ಕಾರ್ಯದರ್ಶಿ ರೇಣುಕಾ ಪಾಟೀಲ ಮಾತನಾಡಿ, ಜಾಲವಾದ ಎಪಿಯ ಮೇಲೆ ಹೆಚ್ಚು ಒತ್ತಡ ಉಂಟಾಗುವುದರ ಕಾರಣ ಎರಡು ಸರದಿಯ ಪ್ರಕಾರ ವಿದ್ಯುತ್ ಪೂರೈಕೆ ಮಾಡಬೇಕು. ಇದರಿಂದ ರೈತರಿಗೆ ಅನುಕೂಲವಾಗುವುದರ ಜೊತೆಗೆ ಅವರ ವ್ಯಾಪ್ತಿಯ ಟಿಸಿ ಹಾಗೂ ಮೋಟಾರ್, ಪಂಪಸೆಟ್ ಗಳು ಸುರಕ್ಷಿತವಾಗಿರುತ್ತವೆ. ಜೊತೆಗೆ ಅನಗತ್ಯವಾಗಿ ಹೆಸ್ಕಾಂ ಸಿಬ್ಬಂದಿಗೆ ಫೋನ್ ಮಾಡುವುದು ತಪ್ಪಿದಂತಾಗುತ್ತದೆ. ಒಂದು ವೇಳೆ ರೈತರ ಮನವಿಗೆ ಸ್ಪಂದಿಸದೇ ಸರಿಯಾಗಿ ವಿದ್ಯುತ್ ಪೂರೈಕೆ ಮಾಡದೇ ಇದ್ದಲ್ಲಿ ರೈತರು ಮುಂದಿನ ಹೋರಾಟಕ್ಕೆ ಇಳಿಯುವುದು ಅನಿವಾರ್ಯ ಎಂದರು.
ಹಣಮಂತ್ರಾಯ ಉಕ್ಕಲಿ, ದಾದಾಗೌಡ ಬಿರಾದಾರ, ಸಿದ್ದು ಇಜೇರಿ, ನಾನಾಗೌಡ ಬಿರಾದಾರ, ಚಿದಾನಂದ ಗೊಳಸಾರ, ಮಹಾಂತೇಶ ಬಿರಾದಾರ, ಶಂಕ್ರಪ್ಪ ಸತ್ಯಪ್ಪಗೋಳ, ಶಂಕರಗೌಡ ಬಿರಾದಾರ, ಪ್ರಶಾಂತ ಹಿಪ್ಪರಗಿ ಶರಣಗೌಡ ಬಿರಾದಾರ, ಅಭಿಷೇಕ ಸಾವಳಗಿ, ಚಂದ್ರಶೇಖರ ಕುಂಬಾರ ಇದ್ದರು.

