ಅಮ್ಮ ಎನ್ನುವ ಪದದಲ್ಲಿ ಅಘಾದ ಶಕ್ತಿ ಇದೆ :ಸಾಸನೂರ
ಉದಯರಶ್ಮಿ ದಿನಪತ್ರಿಕೆ
ತಾಳಿಕೋಟೆ: ಅಮ್ಮಾ ಎಂದು ಕರೆಸಿಕೊಳ್ಳುವ ತಾಯಿಯು ತನ್ನ ಎಲ್ಲ ಮಕ್ಕಳಿಗೆ ಸಂಸ್ಕಾರಯುತ ಬಧುಕನ್ನು ರೂಪಿಸುವಂತಹ ಕೆಲಸ ಮಾಡುತ್ತಾಳೆ ಅಂತಹ ಅಮ್ಮಾ ಎಂಬ ಹೆಸರಿನಲ್ಲಿ ಪ್ರಾರಂಭಿಸಿದ ಫೌಂಡೇಶನ್ ಇತರರಿಗೆ ಮಾದರಿಯಾಗಿ ಬೆಳೆಯಲಿದೆ ಎಂದು ದೇವರ ಹಿಪ್ಪರಗಿ ಮತಕ್ಷೇತ್ರದ ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಅವರು ಹೇಳಿದರು.
ಪಟ್ಟಣದ ಶ್ರೀ ಖಾಸ್ಗತೇಶ್ವರ ಸಭಾಭವನದಲ್ಲಿ ಮಂಗಳವಾರ ನೂತನವಾಗಿ ಆರಂಭವಾದ ಅಮ್ಮಾ ಫೌಂಡೇಶನ್ (ರಿ) ಉದ್ಘಾಟನಾ ಸಮಾರಂಭವನ್ನು ಜ್ಯೋತಿ ಬೆಳಗಿಸುವದರೊಂದಿಗೆ ಉದ್ಘಾಟಿಸಿ ಮಾತನಾಡಿದ ಅವರು, ಅಮ್ಮಾ ಎಂಬ ಪದವು ಜಗತ್ತನ್ನೇ ಗೆಲ್ಲಿಸುವಂತಹ ಶಕ್ತಿ ಅದರಲ್ಲಿದೆ ಮಕ್ಕಳಿಗೆ ತಾಯಿಯಾಗಿ ಮೊದಲನೇ ಗುರುವಾಗಿ ಸಂಸ್ಕಾರ ಜೊತೆಗೆ ಶಿಕ್ಷಣ ಕಲಿಸಿ ದೇಶಕ್ಕೆ ಒಳ್ಳೆಯ ಪ್ರಜೆಯನ್ನು ನೀಡುವಂತಹ ಕೆಲಸ ಮಾಡುತ್ತಾಳೆ ಅಂತಹ ತಾಯಿ ಸ್ವರೂಪದ ಹೆಸರಿನಿಂದ ನಮ್ಮ ದೇಶಕ್ಕೂ ಕೂಡಾ ಭಾರತಾಂಭೆ ಹೆಸರಿನಿಂದ ಕರೆಯುತ್ತೇವೆ. ಸದಾ ಒಳ್ಳೆಯ ವಿಚಾರಗಳೊಂದಿಗೆ ತಮ್ಮ ಮಕ್ಕಳು ಹೀಗೆ ಬೆಳೆಯಬೇಕೆಂಬ ಆಲೋಚನೆಯೊಂದಿಗೆ ಸಮಾಜಕ್ಕೆ ಕೊಡುಗೆಯಾಗಿ ನೀಡುವ ತಾಯಿಯ ಹೆಸರಿನ ಮೇಲೆ ಪ್ರಾರಂಬಿಸಿದ ಅಮ್ಮಾ ಫೌಂಡೇಶನ್‌ದ ಉದ್ದೇಶಗಳು ಒಳ್ಳೆಯ ವಿಚಾರಗಳು ಎಲ್ಲ ಫೌಂಡೇಶನಗಳಿಗಿಂತಲೂ ವಿಭಿನ್ನವಾಗಿ ಸಮಾಜದ ಎಲ್ಲ ಅಂಕು ಡೊಂಕುಗಳನ್ನು ತಿದ್ದುವಂತಹ ಕಾರ್ಯ ಮಾಡಲಿ ಎಂದು ಆಶಿಸಿದರು.
ಇನ್ನೋರ್ವ ಮಾಜಿ ಶಾಸಕರಾದ ಶಿವಪುತ್ರಪ್ಪ ದೇಸಾಯಿ ಅವರು ಮಾತನಾಡಿ, ಅಮ್ಮಾ ಎಂದರೆ ದೈರ್ಯ, ಅಮ್ಮಾ ಎಂದರೆ ಪ್ರೀತಿ ವಾತ್ಸಲ್ಯ ಒಳಗೊಂಡಿದೆ. ಇಂತಹ ಅಮ್ಮಾ ಎಂಬ ಹೆಸರಿನ ಮೇಲೆ ಫೌಂಡೇಶನ್ ಹುಟ್ಟುಹಾಕಿ ಸಮಾಜಿಕವಾದ ಕಾರ್ಯಗಳನ್ನು ಮಾಡಲು ಮುಂದಾದ ಎಲ್ಲ ತಾಯಂದಿರ ಕಾರ್ಯ ಮೆಚ್ಚುವಂತಹದ್ದಾಗಿದೆ ಪ್ರತಿಯೊಬ್ಬರ ಪ್ರೀತಿ ವಾತ್ಸಲ್ಯಕ್ಕೆ ಕಾರಣವಾಗುವ ಅಮ್ಮಾ ಎಂಬ ಹೆಸರು ಫೌಂಡೇಶನ್‌ಕ್ಕೆ ಇಟ್ಟಿರುವದು ಒಳ್ಳೆಯ ಬಧುಕಿನಡೆಗೆ ದಾರಿ ತೋರಿಸುವಂತಹದ್ದಾಗಿದೆ. ಪ್ರತಿಯೊಬ್ಬರು ಪ್ರೀತಿಸುವ ತಾಯಿಗೆ ಫೌಂಡೇಶನ್ ಉದ್ಘಾಟನೆಯ ಸಮಯದಲ್ಲಿ ದೊಡ್ಡವರು ಸಣ್ಣವರು ಎನ್ನದೇ ಎಲ್ಲರಿಂದಲೂ ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಂಡು ತಾಯಿಗೆ ಗೌರವಿಸುವಂತಹ ಕಾರ್ಯ ಮಾಡಿರುವದು ಶ್ಲಾಘನೀಯವಾಗಿದೆ ಎಂದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಮಾಜಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಅವರು ಮಾತನಾಡಿದರು.
ಜೆಎಸ್‌ಜಿ ಫೌಂಡೇಶನ್ ಕಾರ್ಯದರ್ಶಿ ಶ್ರೀಕಾಂತ ಪತ್ತಾರ ಅವರು ಅಮ್ಮಾ ಫೌಂಡೇಶನ್ ಸಂಸ್ಥೆಯ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು.
ತಾಳಿಕೋಟೆ ಶ್ರೀ ಖಾಸ್ಗತೇಶ್ವರ ಮಠದ ಆಡಳಿತಾಧಿಕಾರಿ ಮುರಗೇಶ ವೀರಕ್ತಮಠ ಆಶೀರ್ವಚನ ನೀಡಿದರು.
ಅಮ್ಮಾ ಫೌಂಡೇಶನ್ ಅಧ್ಯಕ್ಷೆ ಬಿ.ಕೆ. ಮಣ್ಣೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಮಯದಲ್ಲಿ ನೂರಾರು ಜನ ತಾಯಂದಿರರಿಗೆ ಮಕ್ಕಳಿಂದ ಪಾದಪೂಜೆ ನೇರವೇರಿಸಲಾಯಿತು.
ಈ ಸಮಯದಲ್ಲಿ ಎಸ್.ಆರ್. ಬೇನಾಳಮಠ, ಶೇಷಾಚಲ ಹವಾಲ್ದಾರ, ಶ್ರೀಮತಿ ವಿದ್ಯಾ ವೀರಕ್ತಮಠ, ಫೌಂಡೆಶನ್ ಉಪಾಧ್ಯಕ್ಷರಾದ ಶ್ರೀಮತಿ ಸುರೇಖಾ ಬಿಳೇಭಾವಿ, ಕಾರ್ಯದರ್ಶಿ ಶ್ರೀಮತಿ ಸುಮಂಗಲಾ ಕೊಳೂರ, ಸದಸ್ಯರುಗಳಾದ ಶ್ರೀಮತಿ ಸುರೇಖಾ ಸಾಲಂಕಿ, ಶ್ರೀಮತಿ ಡಾ.ಗಂಗಾಂಬಿಕಾ ಪಾಟೀಲ, ಶ್ರೀಮತಿ ಅನೀತಾ ಸಜ್ಜನ, ಶ್ರೀಮತಿ ರೇಣುಕಾ ಕಾರ್ಜೋಳ, ಶ್ರೀಮತಿ ಗೀತಾ ಪತ್ತಾರ, ಶ್ರೀಮತಿ ಗುರುಬಾಯಿ ಮಣೂರ, ಶ್ರೀಮತಿ ಡಾ.ಚನ್ನಮ್ಮ ಕತ್ತಿ, ಲಿಂಗೇಶ ರೇವಣಸಿದ್ದಯ್ಯ, ಜ್ಯೋತಿಬಾ ಕೊಡಗೆ, ವಿವಿಧ ಘಟಕಗಳ ಸದಸ್ಯರು, ಪಟ್ಟಣದ ನೂರಾರು ಮಹಿಳೆಯರು ಹಾಗೂ ಸಾರ್ವಜನಿಕರು ಭಾಗವಹಿಸಿದರು.
ವಿಶಾಲಾಕ್ಷಿ ಬಡಿಗೇರ್ ಪ್ರಾರ್ಥನೆ ನಡೆಸಿದರು. ಸುರೇಖಾ ಬಿಳೆಭಾವಿ ಸ್ವಾಗತಿಸಿದರು, ಸುಮಂಗಲ ಕೋಳೂರು ನಿರೂಪಿಸಿದರು.

